ಬಾಗಲಕೋಟೆ: ರಾಜಕೀಯದಲ್ಲಿ ಮತ್ತೊಮ್ಮೆ ಪುನರ್ ಜನ್ಮ ನೀಡಿದ ಬಾಗಲಕೋಟೆ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಪ್ರಸಕ್ತ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು. ಅನ್ಯಾಯ ಮಾಡಿದರೇ ಜನರ ಆಕ್ರೋಶಕ್ಕೆ ಕಾರಣರಾಗುತ್ತೀರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದು, ಸಂತ್ರಸ್ತರಿಗೆ ಪರಿಹಾರ ನೀಡುವುದು, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಇಲ್ಲವಾದಲ್ಲಿ ಜಿಲ್ಲೆಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ೧೦ ಸಾವಿರ ಕೋಟಿ ರೂ. ಕೊಡುತ್ತೇನೆ ಎಂದು ಹೇಳಿದ್ದು, ಕೇವಲ ಭರವಸೆಯಾಗಿದೆ. ಹಣ ಮಾತ್ರ ನೀಡಲಿಲ್ಲ. ಈ ಬಜೆಟ್‌ದಲ್ಲಿಯಾದರೂ ಹಣವನ್ನು ನೀಡುತ್ತಾರೆ ಎಂಬ ಭರವಸೆ ಸಿಎಂ ಮೇಲಿದೆ. ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಿರುವ ಭೂಮಿಯ ಉತಾರದಲ್ಲಿ ಕೆಬಿಜೆಎನ್‌ಎಲ್ ಎಂದು ದಾಖಲಾಗಿದ್ದು, ಉತಾರದಿಂದ ಅದನ್ನು ತೆಗೆದು ಹಾಕಬೇಕು.
೨೦೧೪ರಲ್ಲಿ ತಾವೇ ಘೋಷಣೆ ಮಾಡಿರುವ ಬಾಗಲಕೋಟೆ ಜಿಲ್ಲೆಗೆ ವೈದ್ಯಕೀಯ ಕಾಲೇಜು ಆರಂಭ ಮಾಡಬೇಕು. ನೇಕಾರರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಬೇಕು. ಪ್ರವಾಸೋದ್ಯಮ ಅಭಿವೃದ್ದಿಗೆ ೧೮೦೦ ಕೋಟಿ ರೂ.ಗಳನ್ನು ನೀಡಬೇಕು. ರಾಜ್ಯದ ಪಾಲಿನಲ್ಲಿ ಆಗುವ ರೈಲ್ವೆ ಕಾಮಗಾರಿಗೆ ಹೆಚ್ಚಿನ ಹಣ ನೀಡಬೇಕು ಎಂದು ಹೇಳಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದನ್ನು ನಿಲ್ಲಿಸಬೇಕು. ನಾಲಿಗೆ ಹರಿಬಿಟ್ಟರೆ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಸತ್ಯನಾರಾಯಣ ಹೇಮಾದ್ರಿ, ಮಾತನಾಡಿ, ಕ್ಯಾಬಿನೆಟ್ ಸಚಿವರಾಗಿರುವ ಸಂತೋಷ ಲಾಡ್ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಣ್ಣತನದ ಮಾತುಗಳನ್ನು ಆಡುವುದನ್ನು ನಿಲ್ಲಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು ನಾಯ್ಕರ, ಮಲ್ಲಯ್ಯ ಮೂಗನೂರಮಠ ಇದ್ದರು