ಪ್ರಜಾಪ್ರಭುತ್ವ ಉಳಿವಿಗೆ ನ್ಯಾಯಾಂಗದ ಸ್ವಾತಂತ್ರ್ಯ ಅಗತ್ಯ: ಸೋಮನಾಥ ಶರ್ಮಾ

ಬಳ್ಳಾರಿ: ದೇಶದಲ್ಲಿ ರಾಜಕೀಯದಲ್ಲಿ ಧರ್ಮವನ್ನು ಬೆರೆಸುತ್ತಿರುವುದು ಸರಿಯಲ್ಲ ಎಂದು
ಅಖಿಲ ಭಾರತ ವಕೀಲರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಸೋಮನಾಥ ಶರ್ಮಾ ಆಕ್ಷೇಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವ, ವಕೀಲರ ಕಲ್ಯಾಣ ಯೋಜನೆಗಳು, ಜಾತ್ಯತೀತ ಸರ್ಕಾರ ಅಯ್ಕೆ ಬಗ್ಗೆ ಅಖಿಲ ಭಾರತ ವಕೀಲರ ಸಂಘ ಕಾಳಜಿ ಹೊಂದಿದೆ. ಪ್ರಜಾಪ್ರಭುತ್ವ ಉಳಿವಿಗೆ ನ್ಯಾಯಾಂಗದ ಸ್ವಾತಂತ್ರ್ಯ ಅಗತ್ಯವಾಗಿದೆ. ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಸದೀಯ, ನ್ಯಾಯಾಂಗದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದರು.

ದೇಶದಲ್ಲಿ ವಕೀಲರಿಗೆ ಸೌಲಭ್ಯಗಳಿಲ್ಲ. ಈ ನ್ಯೂನ್ಯತೆಗಳನ್ನು ಸರಿಪಡಿಸಬೇಕು. ಸಂವಿಧಾನದ ಮೇಲಿನ ದಾಳಿ ತಡೆಗೆ ಜಾತ್ಯತೀತ ಸರ್ಕಾರದ ಆಯ್ಕೆ ಅಗತ್ಯ ಎಂದು ಪ್ರತಿಪಾದಿಸಿದರು.

ದೇಶದ ಸಂವಿಧಾನ, ನ್ಯಾಯಾಂಗ ಹಾಗೂ ದುರ್ಬಲರ ಸೌಲಭ್ಯಗಳಿಗೆ ಧಕ್ಕೆ ಬಂದರೆ ರಕ್ಷಿಸಬೇಕೆಂಬ ಉದ್ದೇಶವನ್ನು ಅಖಿಲ ಭಾರತ ವಕೀಲರ ಸಂಘ ಹೊಂದಿದೆ. ನಾವು ಯಾವುದೇ ರಾಜಕೀಯ ಪಕ್ಷದ ಪರವಾಗಿ ಮಾತನಾಡದೆ ಸಂವಿಧಾನದ ಪರವಾಗಿ ಮಾತನಾಡುತ್ತಿದ್ದೇವೆ ಎಂದು ಹೇಳಿದರು.

ಸಂಘದ ರಾಜ್ಯಾಧ್ಯಕ್ಷ ಶಂಕ್ರಪ್ಪ ಮಾತನಾಡಿ, ದೇಶದ 21 ರಾಜ್ಯಗಳಲ್ಲಿ ಸಂಘ ಇದೆ. ಸಾಮಾಜಿಕ ಅನ್ಯಾಯಗಳಿಗೆ ಸಂಘ ಸ್ಪಂದಿಸಿ ಹೋರಾಟ ಸಂಘಟಿಸಿದೆ. ಜಾತ್ಯತೀತ ದೇಶದಲ್ಲಿ ಹಿಂದುತ್ವ ಮುನ್ನೆಲೆ ಬರುತ್ತಿದೆ. ಕೇಂದ್ರ ಸರ್ಕಾರಕ್ಕೆ ಹಾಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸಿದರು. ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಸುರೇಂದ್ರನ್, ಸಂಘದ ಆಂಧ್ರಪ್ರದೇಶದ ಮುಖಂಡ ಸೂರ್ಯ ಸತ್ಯನಾರಾಯಣ, ಗಾಂಧಿ ಭವನದ ಕಾರ್ಯದರ್ಶಿ ಟಿ.ಜಿ.ವಿಠಲ್ ಹಾಜರಿದ್ದರು.

Leave a Reply

Your email address will not be published. Required fields are marked *