ರಸ್ತೆ ಸುರಕ್ಷತೆಗಿಲ್ಲ ಆದ್ಯತೆ

ಬಿ. ನರಸಿಂಹ ನಾಯಕ್ ಬೈಂದೂರು
ಅಪ್ರಾಪ್ತರು ವಾಹನ ಚಾಲನೆ, ಅವರಿಗೆ ವಾಹನ ನೀಡುವುದು ಕಾನೂನು ರೀತಿಯಲ್ಲಿ ಅಪರಾಧವಾದರೂ ಬೈಂದೂರು ಪರಿಸರದಲ್ಲಿ ಅಪ್ರಾಪ್ತರ ವಾಹನ ಚಾಲನೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕಾನೂನು ಭಯವಿಲ್ಲದ ಇವರ ಸವಾರಿ ಇತರರನ್ನು ಅಪಾಯಕ್ಕೆ ಆಹ್ವಾನಿಸುತ್ತಿದೆ.

18 ವರ್ಷದೊಳಗಿನ ಬಹುತೇಕ ಬಾಲಕರು ಎಗ್ಗಿಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುವ ದೃಶ್ಯ ಇಲ್ಲಿ ಸಾಮಾನ್ಯ. ಶಾಲಾ, ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಬೈಕ್‌ಗಳಲ್ಲೇ ಬರುತ್ತಾರೆ. ಒಂದು ಬೈಕಿನ ಮೇಲೆ ಮೂವರು, ಕೆಲವೊಮ್ಮೆ ನಾಲ್ವರು ವಿದ್ಯಾರ್ಥಿಗಳು ಪ್ರಯಾಣಿಸುವ ದೃಶ್ಯ ದಿನನಿತ್ಯ ಕಾಣಬಹುದಾಗಿದೆ. ಇದಕ್ಕೆ ಪಾಲಕರು ಮಾತ್ರವಲ್ಲ ಶಾಲಾ ಆಡಳಿತ ಮಂಡಳಿಯೂ ನಿರ್ಬಂಧ ಮಾಡಿದಂತಿಲ್ಲ. ವಾಹನ ಚಾಲನೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ವಾಹನ ಚಾಲನ ಪರವಾನಗಿ ಪಡೆದಿರಬೇಕು. ಆದರೆ ಈ ನಿಯಮಗಳನ್ನು ಇಲ್ಲಿ ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಸಂಚಾರ ನಿಯಮ ಅರಿವಿಲ್ಲದ ಬಾಲಕರು ಮನಸೋ ಇಚ್ಛೆ ವಾಹನ ಚಲಾಯಿಸಿ ಕೆಲವೊಮ್ಮೆ ಅಪಘಾತಕ್ಕೂ ಕಾರಣರಾಗುತ್ತಿದ್ದಾರೆ.

ಯಾವುದೇ ವ್ಯವಸ್ಥೆ ಸರಿದೂಗಿಸಿಕೊಂಡು ಹೋಗುವುದು ಕೇವಲ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮಾತ್ರ ಸೀಮಿತವಲ್ಲ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಪ್ರಮುಖ. ಆದರೆ ಇಲ್ಲಿನ ಕೆಲವು ಅರ್ಹ ವಾಹನ ಚಾಲಕರಿಗೆ ಸಂಚಾರ ನಿಯಮವೇ ತಿಳಿಯದಿರುವುದು, ಎಲ್ಲೆಂದರಲ್ಲಿ ವಾಹನ ಚಲಾಯಿಸುವುದು ರೂಢಿಯಾಗಿದೆ. ಠಾಣೆಯಲ್ಲಿ ಆರಕ್ಷಕ ಸಿಬ್ಬಂದಿ ಕೊರತೆ ಇದ್ದು, ಅವರು ಎಲ್ಲ ಕಡೆಗಳಲ್ಲಿ ಕ್ಲಪ್ತ ಸಮಯಕ್ಕೆ ತಲುಪಲು ಅಸಾಧ್ಯವಾಗಿರುವುದು, ಇವರಿಗೆ ವರದಾನವಾಗಿದೆ. ದಾರಿಯಲ್ಲಿ ಪೊಲೀಸ್ ಚೆಕ್ಕಿಂಗ್ ಇದೆ ಎಂದರೆ ಇವರು ಒಳಮಾರ್ಗದಲ್ಲಿ ನುಸುಳಿ ಬಿಡುತ್ತಾರೆ.

ಸಂಚಾರಿ ಪೊಲೀಸ್ ಠಾಣೆಗೆ ಬೇಡಿಕೆ: ಬೈಂದೂರು ಪೇಟೆ ಭಾಗದಲ್ಲಿ ಕೆಲವು ಅಂಗಡಿ ಹಾಗೂ ಗೂಡಂಗಡಿಗಳು ಮುಖ್ಯ ರಸ್ತೆಗಳ ಇಕ್ಕೆಲಗಳನ್ನು ಸ್ವಲ್ಪಮಟ್ಟಿಗೆ ನುಂಗಿದೆ. ಹಾಗಾಗಿ ಉಳಿದ ಭಾಗದಲ್ಲಿ ಒಂದೆಡೆ ಪಾರ್ಕಿಂಗ್ ವ್ಯವಸ್ಥೆಯಿಂದ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿ ಪಾದಚಾರಿಗಳಿಗೆ ಹಾಗೂ ಇತರರಿಗೆ ಕಿರಿಕಿರಿ ಉಂಟುಮಾಡುತ್ತಿರುವುದು ದಿನನಿತ್ಯದ ಪರಿಪಾಠವಾಗಿದೆ. ಅಲ್ಲದೇ ಇಲ್ಲಿ ಟ್ರಾಫಿಕ್ ಠಾಣೆಯೂ ಇಲ್ಲ. ತಾಲೂಕು ಕೇಂದ್ರವಾದ ಬೈಂದೂರಿಗೆ ಅತ್ಯಂತ ಶೀಘ್ರವಾಗಿ ಸಂಚಾರಿ ಪೊಲೀಸ್ ಠಾಣೆ ತೆರೆಯಬೇಕಿದೆ. ತಿಂಗಳಿಗೊಮ್ಮೆಯಾದರೂ ರಸ್ತೆ ಸುರಕ್ಷತೆ ಹಾಗೂ ರಸ್ತೆ ನಿಯಮ ಕುರಿತ ಕಾರ್ಯಾಗಾರ ನಡೆಸುವ ಮೂಲಕ ವಾಹನ ಸವಾರರಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವ ಕೆಲಸವಾಗಬೇಕಿದೆ.

ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ. ಇಂಥವರು ಕಂಡುಬಂದರೆ ವಾಹನ ತಪಾಸಣೆ ನಡೆಸಿ ಅವರ ಪಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಕೆಲವು ದ್ವಿಚಕ್ರ, ಕಾರು, ಆಟೋ ಚಾಲಕರು ಕೂಡಾ ತಮ್ಮಿಂದ ಇತರರಿಗೆ ತೊಂದರೆಯಾಗುತ್ತಿದೆ ಎಂಬ ಅರಿವಿಲ್ಲದೇ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದಲ್ಲಿ ಅಂತವರ ಮೇಲೂ ಮುಲಾಜಿಲ್ಲದೇ ಕೇಸು ದಾಖಲಿಸುತ್ತಿದ್ದೇವೆ.
ತಿಮ್ಮೇಶ್ ಬಿ. ಎನ್.  ಠಾಣಾಧಿಕಾರಿ ಬೈಂದೂರು ಠಾಣೆ

ಮಕ್ಕಳ ಮೇಲಿನ ಪ್ರೀತಿಗೋ ಅಥವಾ ಅವರ ಒತ್ತಾಯಕ್ಕೋ ಮಣಿದು ಪಾಲಕರು ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ಜಾಗೃತಿ ಮೂಡಿಸಬೇಕಾಗಿದೆ. ಶಾಲೆಗೆ ಅಪ್ರಾಪ್ತರು ದ್ವಿಚಕ್ರ ವಾಹನ ತರದಂತೆ ಸಂಬಂಧಪಟ್ಟವರು ಕಟ್ಟುನಿಟ್ಟಿನ ಆದೇಶ ಮಾಡಬೇಕು. ಬಾಲಕರು ತರುವ ವಾಹನಗಳನ್ನು ತಪಾಸಣೆ ಮಾಡಬೇಕು ಹಾಗೂ ಅವರ ಪಾಲಕರಿಗೂ ದಂಡ ವಿಧಿಸಿ ಎಚ್ಚರಿಕೆ ನೀಡಬೇಕು.
ಗಿರೀಶ್ ಬೈಂದೂರು ಮಾಜಿ ಅಧ್ಯಕ್ಷರು ಯಡ್ತರೆ ಗ್ರಾಪಂ

ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸುವ ಮೂಲಕ ಪಾದಚಾರಿಗಳಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಅಪ್ರಾಪ್ತರಿಗೆ ವಾಹನ ನೀಡಬಾರದೆಂಬ ಕನಿಷ್ಠ ಜ್ಞಾನವೂ ಪಾಲಕರಿಗೆ ಇಲ್ಲದಿರುವುದು ದುರಂತ.
ಸಂತೋಷ್ ಶೆಟ್ಟಿ ವ್ಯಾಪಾರಿ ಬೈಂದೂರು