ರಸ್ತೆ ಸಂಚಾಕ್ಕೆ ತಡೆಯೊಡ್ಡಿ ಆಕ್ರೋಶ

ಹಾವೇರಿ: ಸಮೃದ್ಧ ಜೀವನ ಕೋ-ಆಪರೇಟಿವ್ ಸೊಸೈಟಿಯು ರಾಜ್ಯದಲ್ಲಿ ಏಜೆಂಟರ ಮೂಲಕ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿದ್ದು, ಕೂಡಲೇ ಅದರ ವಿರುದ್ಧ ಕ್ರಮ ಕೈಗೊಂಡು ವಂಚನೆಗೆ ಒಳಗಾದವರಿಗೆ ಹಣ ಮರಳಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಮೂಲನಾ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಹುಕ್ಕೇರಿಮಠದಿಂದ ಎಂಜಿ ರಸ್ತೆಯ ಮೂಲಕ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಂಚನೆಗೆ ಒಳಗಾದ ಗ್ರಾಹಕರು, ಏಜೆಂಟರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಸಮೃದ್ಧ ಜೀವನ ಸೊಸೈಟಿಗೆ ಜನರಿಂದ ಹಣ ಸಂಗ್ರಹಿಸಿ ಕೊಟ್ಟಿರುವ ಏಜೆಂಟರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಬಡವರು, ರೈತರು, ಕೂಲಿಕಾರ್ವಿುಕರು, ದಲಿತರು ಸೇರಿದಂತೆ ಅನೇಕರಿಂದ ಏಜೆಂಟರ ಮೂಲಕ ಆರ್​ಡಿ, ಎಫ್​ಡಿ, ಪಿಗ್ಮಿ ಮೂಲಕ ತಮ್ಮ ಸೊಸೈಟಿಗೆ ಹಣ ಸಂದಾಯ ಮಾಡಿಕೊಂಡಿದ್ದಾರೆ. ಈಗ ಕಂಪನಿ ಮುಚ್ಚಿ ಹೋಗಿರುವುದರಿಂದ ಗ್ರಾಹಕರು ಏಜೆಂಟರ ಬಳಿ ಬಂದು ತಮ್ಮ ಹಣವನ್ನು ಮರಳಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೂಡಲೇ ಸರ್ಕಾರ ಸೊಸೈಟಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹಣ ಕಟ್ಟಿದವರಿಗೆ ಮರಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಸವರಾಜ ಟೀಕಿಹಳ್ಳಿ ಮಾತನಾಡಿ, ಹಣ ತುಂಬಿಸಿಕೊಂಡಿರುವ ಮಹಿಳಾ ಏಜೆಂಟರು ಮಾನಸಿಕ ಸಮಸ್ಯೆಯಿಂದ ಬಳಲುವಂತಾಗಿದೆ. ಸಾವಿರಾರು ಸಂಸಾರಗಳು ಬೀದಿಗೆ ಬಂದಿವೆ. ಕೂಡಲೇ ಮುಖ್ಯಮಂತ್ರಿಗಳು ಸೊಸೈಟಿ ವಿರುದ್ಧ ಕಠಿಣ ಕ್ರಮ ಕೈಗೊಂಡು ಗ್ರಾಹಕರು ಕಟ್ಟಿದ ಹಣವನ್ನು ಲಾಭಾಂಶದೊಂದಿಗೆ ಮರಳಿಸಬೇಕು ಎಂದು ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಶಿವಶಂಕರ ಟೀಕಿಹಳ್ಳಿ, ಉಪಾಧ್ಯಕ್ಷ ಹರೀಶ ಇಂಗಳಗೊಂದಿ, ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಜಿಂಗಾಡೆ, ಸಂಚಾಲಕ ಮಾಲತೇಶ ಪಾಟೀಲ, ನ್ಯಾಯವಾದಿ ವನಿತಾ ಗುತ್ತಲ, ವಿಷ್ಣು ಜಿಂಗಾಡೆ, ಪರಮೇಶ್ವರ ಭಜಂತ್ರಿ ಇತರರಿದ್ದರು.

Leave a Reply

Your email address will not be published. Required fields are marked *