ರಸ್ತೆ ವಿಭಜಕ ತ್ಯಾಜ್ಯ ತೆರವು

ಮುಂಡರಗಿ: ಪಟ್ಟಣದ ಹೆಸರೂರ ಸರ್ಕಲ್​ನಿಂದ ಬಸ್ ನಿಲ್ದಾಣದವರೆಗೆ ಒಡೆದು ಹಾಳಾಗಿದ್ದ ಹೆದ್ದಾರಿ ವಿಭಜಕದ ತ್ಯಾಜ್ಯವನ್ನು ಪುರಸಭೆ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಸೆ.2016ರಲ್ಲಿ ಹೂವಿನಹಡಗಲಿ ಮಾರ್ಗವಾಗಿ ಮುಂಡರಗಿ-ಹರಪನಹಳ್ಳಿ ಹೆದ್ದಾರಿ ಕಾಮಗಾರಿ ಪ್ರಾರಂಭಿಸಲಾಯಿತು. ಪಟ್ಟಣದ ಹೆಸರೂರ ಸರ್ಕಲ್​ನಿಂದ ಬಸ್ ನಿಲ್ದಾಣದವರೆಗೆ ರಸ್ತೆ ವಿಸ್ತರಣೆ ಮಾಡದೇ ಮೊದಲಿದ್ದ ರಸ್ತೆಯಲ್ಲಿಯೇ 1.5 ಮೀಟರ್ ರಸ್ತೆ ವಿಭಜಕ ಹಾಕಲಾಗಿತ್ತು. ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 1.5 ಮೀಟರ್​ಇದ್ದ ಡಿವೈಡರ್ ಅನ್ನು 0.75ಮೀಟರ್​ನಷ್ಟು ಮಾತ್ರ ನಿರ್ವಿುಸುವಂತೆ ಪುರಸಭೆ ಆಡಳಿತ ಮಂಡಳಿ ಗುತ್ತಿಗೆದಾರರಿಗೆ ಸೂಚಿಸಿತ್ತು.

ಆದರೆ, ಪುರಸಭೆ ಸೂಚನೆಯನ್ನು ಗಣನೆಗೆ ತೆಗೆದುಕೊಳ್ಳದೇ ಗುತ್ತಿಗೆದಾರರು ಕಿರಿದಾದ ರಸ್ತೆಯಲ್ಲೇ 1.5 ಮೀಟರ್ ವಿಭಜಕ ನಿರ್ವಿುಸಿದ್ದರು. ಆಗ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ ಎಂದು ಆರೋಪಿಸಿದ ಪುರಸಭೆ ವಿಭಜಕವನ್ನು ನಾಶ ಪಡಿಸಿತ್ತು. ಒಡೆದು ಹಾಕಲಾದ ರಸ್ತೆ ವಿಭಜಕದ ತ್ಯಾಜ್ಯ ವಿಲೇವಾರಿ ಮಾಡದೇ ಬಿಟ್ಟಿದ್ದರಿಂದ ವಾಹನ ಸವಾರರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ, ಇದರಿಂದ ಅನೇಕ ಅಪಘಾತಗಳು ಸಹ ಸಂಭವಿಸಿದ್ದವು.

ಪಟ್ಟಣದ ಹೆದ್ದಾರಿ ಕಾಮಗಾರಿ ಹಾಗೂ ಒಡೆದು ಹಾಳಾಗಿರುವ ರಸ್ತೆ ವಿಭಜಕದಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಆಗುತ್ತಿರುವ ಸಮಸ್ಯೆ ಕುರಿತು ಮಾ.1ರಂದು ‘ವಿಜಯವಾಣಿ’ಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು. ವರದಿ ಪ್ರಸ್ತಾಪಿಸಿ ಪುರಸಭೆ ಸದಸ್ಯ ರಾಘವೇಂದ್ರ ಕುರಿಯವರ ಅವರು ಸಭೆಯ ಗಮನ ಸೆಳೆದು ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿದ್ದರು.

ಉಳಿದ ಕಾಮಗಾರಿ ಶೀಘ್ರ: ರಸ್ತೆ ವಿಭಜಕದ ತ್ಯಾಜ್ಯವನ್ನು ಸ್ಥಳಾಂತರಗೊಳಿಸದ ಪುರಸಭೆ ವಿರುದ್ಧ ಸಾರ್ವಜನಿಕರು ಹರಿಹಾಯ್ದಿದ್ದರು. ಮಾ.5ರಂದು ಪುರಸಭೆ ಸಾಮಾನ್ಯ ಸಭೆಯಲ್ಲಿ ಸಹ ಒಡೆದು ನಾಶವಾಗಿರುವ ವಿಭಜಕದ ತ್ಯಾಜ್ಯವನ್ನು ತೆರವುಗೊಳಿಸುವಂತೆ ಪುರಸಭೆ ಅಧ್ಯಕ್ಷ ಬಸವರಾಜ ನರೇಗಲ್ಲ ಹಾಗೂ ಎಲ್ಲ ಸದಸ್ಯರು ಮುಖ್ಯಾಧಿಕಾರಿಗೆ ಸೂಚಿಸಿದ್ದರು. ಹೀಗಾಗಿ ರಸ್ತೆ ಮಧ್ಯದಲ್ಲಿದ್ದ ಒಡೆದು ಹಾಳಾಗಿದ್ದ ವಿಭಜಕದ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಹೊಸದಾಗಿ ಡಿವೈಡರ್, ಚರಂಡಿ ಸೇರಿ ಇನ್ನುಳಿದ ಕಾಮಗಾರಿಯನ್ನು ಶೀಘ್ರವೇ ಕೈಗೊಳ್ಳುವಂತೆ ರಸ್ತೆ ನಿಗಮದ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಮುಖ್ಯಾಧಿಕಾರಿ ಸಿದ್ಧಲಿಂಗಪ್ರಭು ಇಬ್ರಂಡಿ ತಿಳಿಸಿದರು.