ರಸ್ತೆ ರಾಡಿಮಯ, ಸಂಚಾರ ಅಯೋಮಯ!

2 Min Read
ರಸ್ತೆ ರಾಡಿಮಯ, ಸಂಚಾರ ಅಯೋಮಯ!
ಚನ್ನಮ್ಮ ಕಿತ್ತೂರು ಪಟ್ಟಣ ಹೊರವಲಯದಲ್ಲಿ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಸಂಚರಿಸುತ್ತಿರುವ ವಿದ್ಯಾರ್ಥಿನಿಯರು.

ಚನ್ನಮ್ಮ ಕಿತ್ತೂರು: ಗ್ರಾಮಗಳಾಗಿದ್ದ ಊರುಗಳು ಪಟ್ಟಣಗಳಾಗಿ ಮೇಲ್ದರ್ಜೆಗೇರಿದ ಮೇಲೆ ಅಭಿವೃದ್ಧಿ ಹೊಂದುವುದು ಕೂಡ ಮುಖ್ಯವಾಗುತ್ತದೆ. ಆದರೆ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಕಿತ್ತೂರು ಪಟ್ಟಣದ ರಸ್ತೆಗಳು ಅಯೋಮಯವಾಗಿವೆ. ಪಟ್ಟಣ ಕೇವಲ ಹೆಸರಿಗೆ ಮಾತ್ರ ತಾಲೂಕು ಎಂಬಂತಾಗಿದೆ. ತಾಲೂಕು ಕೇಂದ್ರದಲ್ಲಿರಬೇಕಾದ ಮೂಲ ಸೌಲಭ್ಯಗಳಿಲ್ಲ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಬೀಡಿ ರಸ್ತೆ ಪಕ್ಕದ ಬಸವೇಶ್ವರ ನಗರದ ಒಳ ರಸ್ತೆ ಹಾಗೂ ಸರ್ಕಾರಿ ಕಾಲೇಜು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.
ಸಂಪೂರ್ಣ ರಾಡಿಮಯವಾಗಿರುವ ಈ ರಸ್ತೆಯಲ್ಲಿ ಸಂಚಾರ ಅಯೋಮಯವಾಗಿದೆ. ಕಾಲೇಜಿಗೆ ಹೋಗಲು ಸಾವಿರಾರು ವಿದ್ಯಾರ್ಥಿಗಳು ಮಳೆಗಾಲದಲ್ಲಂತೂ ಹರಸಾಹಸಪಡಬೇಕಾಗಿದೆ. ಕಿ.ಮೀ. ದೂರ ನಡೆಯುವುದಲ್ಲದೆ ಇಂಥ ಕೆಸರುಗದ್ದೆಯನ್ನೇ ಮೀರಿಸುವ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ.

ಕಿತ್ತೂರು ಪಟ್ಟಣದ ಹೊರವಲಯದ ಬಸವ ನಗರದಲ್ಲಿ ವಾಸವಾಗಿರುವ ಜನರು ಮಳೆಗಾಲದಲ್ಲಿ ಹೊರಗಡೆ ಬರಬೇಕು ಎಂದರೆ ಕಷ್ಟಪಟ್ಟು ರಸ್ತೆಗಿಯಬೇಕು. ಒಂದು ವೇಳೆ ಕೆಸರಿನ ರಸ್ತೆಯಲ್ಲಿ ದ್ವಿಚಕ್ರದ ವಾಹನದ ಮೇಲೆ ಹೋದರೆ ಜಾರಿ ಬೀಳುವುದು ನಿಕ್ಕಿ. ಕಾರಿನಲ್ಲಿ ಹೋದರೂ ಕಾರು ಸಿಲುಕಿಕೊಳ್ಳುವ ಭಯ. ನಡೆದು ಹೋದರೆ ಮಳೆ ಹಾಗೂ ರಾಡಿ ಭಯ. ಈ ಎಲ್ಲ ಸಮಸ್ಯೆಯಿಂದ ಹೈರಾಣ ಆಗಿರುವ ಜನರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಂತೆ ಕಾಲೇಜಿಗೆ ಹೋಗುವ ರಸ್ತೆಯ ಕಾಮಗಾರಿಗೆ ಹಣ ಮಂಜೂರಾಗಿದೆ ಟೆಂಡರ್ ಕೊಟ್ಟಿದ್ದೇವೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆ. ಬಸವೇಶ್ವರ ಬಡಾವಣೆಯಲ್ಲಿ ಇನ್ನೂ ಮೂರು ರಸ್ತೆಗಳು ಕೆಸರಗದ್ದೆಯಂತೆ ಇದ್ದರೂ ಅಭಿವೃದ್ಧಿಯ ಆಶ್ವಾಸನೆ ಬಂದಿಲ್ಲ. ಹಾಗಾದರೆ, ಸಮಸ್ಯೆಗೆ ಪರಿಹಾರ ಯಾವಾಗ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ರಸ್ತೆಯಲ್ಲಿ ಶಾಲಾ-ಕಾಲೇಜಿನ ಮಕ್ಕಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ವಾಹನಗಳು ಚಲಿಸಲಾಗದ ರೀತಿಯಲ್ಲಿ ರಸ್ತೆಗಳು ಹದಗೆಟ್ಟಿವೆ. ಸಂಬಂಧಿಸಿದವರು ಇನ್ನಾದರೂ ಕಣ್ಣು ತೆರೆಯಲಿ.
| ಪ್ರಕಾಶ ನಾಡಗೌಡರ, ಬಸವೇಶ್ವರ ನಗರ ನಿವಾಸಿ

ಈಗಾಗಲೇ ಕಾಲೇಜಿಗೆ ಹೋಗುವ ರಸ್ತೆಗೆ ಹಣ ಬಿಡುಗಡೆ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ, ಇನ್ನುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ, ಬಸವೇಶ್ವರ ಬಡಾವಣೆಯಲ್ಲಿ ಇನ್ನೂ ಮೂರ್ನಾಲ್ಕು ರಸ್ತೆಗಳು ಕೆಸರ್ಗದ್ದೆಯ ಅವಸ್ಥೆಯಲ್ಲಿ ಇವೆ ಇವುಗಳ ಬಗ್ಗೆ ಪ್ರತಿನಿಧಿಗಳು ಗಮನಹರಿಸಬೇಕು.
|ರಮೇಶ ಶಿರಗುಪ್ಪಿ ಬಸವೇಶ್ವರ ನಗರ ನಿವಾಸಿ

| ನಾಗರಾಜ ಜೋರಾಪುರ ಚನ್ನಮ್ಮ ಕಿತ್ತೂರು

See also  ದ.ಕ, ಉಡುಪಿ ಧಾರಾಕಾರ ಮಳೆ
Share This Article