ರಸ್ತೆ ಮೇಲಿನ ಗೂಡಂಗಡಿ ತೆರವು

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ಪಟ್ಟಣ ರಾಷ್ಟ್ರಿಯ ಹೆದ್ದಾರಿ ಅಡಿಯಲ್ಲಿ ಬರುವುದರಿಂದ ಇಲ್ಲಿ ವಾಹನ ಸಂಚಾರ ಜೋರಾಗಿರುತ್ತದೆ. ಹೀಗಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆ ಮೇಲೆ ವ್ಯಾಪಾರ ಮಾಡುವ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಗೂ ಪುರಸಭೆ ಅಧಿಕಾರಿಗಳು ಶುಕ್ರವಾರ ಮುಂದಾಗಿದ್ದಾರೆ.

ಪಿಎಸ್ಐ ರೇವಣಸಿದ್ದಪ್ಪ ಜೀರಂಕಲಗಿ ಮಾತನಾಡಿ, ಗೂಡಂಗಡಿಗಳ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ವ್ಯಾಪಾರಸ್ಥರ ಹಿತ ಅಡಗಿದೆ. ಇದು ಹೆದ್ದಾರಿ ಆಗಿರುವುದರಿಂದ ಬೃಹತ್ ವಾಹನಗಳು ಸಂಚರಿಸುತ್ತವೆ. ವ್ಯಾಪಾರಸ್ಥರಿಗೆ ಯಾವುದೇ ಸಮಯದಲ್ಲೂ ಅಪಾರ ಸಂಭವಿಸಬಹುದು. ಆದ್ದರಿಂದ ಈ ಕಾಯರ್ಾಚರಣೆ ನಡೆಸಲಾಗುತ್ತಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ಮಾತನಾಡಿ, ಬೀದರ್- ಶ್ರೀರಂಗಪಟ್ಟಣ ಹಾಗೂ ಹುಮನಾಬಾದ್- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಜೇವರ್ಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿದೆ. ರಸ್ತೆಯ ಬದಿಯಲ್ಲಿ ಗೂಡಂಗಡಿ, ತಳ್ಳು ಬಂಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಗೂಡಂಗಡಿಗಳ ತೆರವಿನಿಂದ ಹೆದ್ದಾರಿ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ರಸ್ತೆ ಬದಿಯಲ್ಲಿನ ಸರ್ಕಾರಿ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡ ಕೆಲವರು, ಅವುಗಳನ್ನು ಬೇರೆಯವರಿಗೆ ಬಾಡಿಗೆಗೆ ನೀಡುತ್ತಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿದ್ದವು. ಇದೀಗ ಅಂತಹ ಗೂಡಂಗಡಿಗಳನ್ನು ತೆರವುಗೊಳಿಸಿ ಅರ್ಹ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಕೆಲಸವೂ ಅಧಿಕಾರಿಗಳಿಂದ ನಡೆಯಿತು. ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳ ಕಾರ್ಯಕ್ಕೆ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸ್ಥಳೀಯ ಠಾಣೆ ಪೊಲೀಸ್ ಸಿಬ್ಬಂದಿ ಹಾಗೂ ಪುರಸಭೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜೇವರ್ಗಿಯ ರಿಲಾಯನ್ಸ್ ಪೆಟ್ರೋಲ್ ಬಂಕ್ನಿಂದ ಬಸವೇಶ್ವರ ವೃತ್ತದವರೆಗೆ ಮುಖ್ಯ ರಸ್ತೆಯ ಎರಡು ಬದಿಯಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆ ಎರಡು ದಿನ ನಡೆಯಲಿದೆ.
| ರೇವಣಸಿದ್ದಪ್ಪ ಜೀರಂಕಲಗಿ, ಪಿಎಸ್ಐ