ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಪ್ರತಿಭಟನೆ

ಗಜೇಂದ್ರಗಡ: ಪಟ್ಟಣದ ದುರ್ಗಾ ವೃತ್ತದಿಂದ ಉದ್ಯಾನದವರೆಗೆ 2016-17ನೇ ಸಾಲಿನ ನಗರೋತ್ಥಾನ ಯೋಜನೆಯಡಿಯಲ್ಲಿ 1 ಕೋಟಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ವಣವಾಗುತ್ತಿರುವ ಡಾಂಬರ್ ರಸ್ತೆ ಬದಿ ಇಂಟರ್​ಲಾಕ್ ಪೇವರ್ಸ್ ಅಳವಡಿಕೆ ಕಾಮಗಾರಿ ವಿಳಂಬ ಖಂಡಿಸಿ, ಸ್ಥಳೀಯ ವ್ಯಾಪಾರಸ್ಥರು ರಸ್ತೆ ಮಧ್ಯೆ ದ್ವಿಚಕ್ರ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಕಳೆದ ಒಂದು ವರ್ಷದಿಂದ ನಡೆಸುತ್ತಿರುವ ರಸ್ತೆ ಕಾಮಗಾರಿಯ ವಿಳಂಬದಿಂದಾಗಿ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ. ಅಲ್ಲದೆ, ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಅಗೆಯಲಾಗಿದೆ. ಇದರಿಂದ ಅಂಗಡಿಗಳಿಗೆ ಬರುವ ಗ್ರಾಹಕರು ವಾಹನ ನಿಲುಗಡೆ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು, ಪ್ರಾಣಾಪಾಯದಿಂದ ಪಾರಾದ ಹಲವು ಘಟನೆಗಳು ಸಂಭವಿಸಿವೆ. ಹೀಗಾಗಿ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಹಲವಾರು ಬಾರಿ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ವ್ಯಾಪಾರಸ್ಥರು ಪಟ್ಟುಹಿಡಿದು ಪ್ರತಿಭಟನೆ ಮುಂದುವರಿಸಿದರು.

ಪಟ್ಟಣದ ಪ್ರಮುಖ ರಸ್ತೆಯನ್ನು ಬಂದ್ ಮಾಡಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾದ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಅವರ ವಿರುದ್ಧ ವ್ಯಾಪರಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಮಾತನಾಡಿ, ಗುತ್ತಿಗೆದಾರ ಬಿ.ಆರ್. ಮೇಟಿ ಅವರು ನಡೆಸುತ್ತಿರುವ ಮಂದಗತಿ ಕಾಮಗಾರಿಯಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಹೀಗಾಗಿ, ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಇನ್ನೆರೆಡು ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಪ್ರತಿಭಟನೆ ಕೈ ಬಿಡಿ ಎಂದು ಮನವಿ ಮಾಡಿದರು. ಅಲ್ಲದೆ, ದೂರವಾಣಿ ಮೂಲಕ ಗುತ್ತಿಗೆದಾರರಿಗೆ ತಕ್ಷಣದಿಂದಲೇ ಕೆಲಸ ಆರಂಭಿಸುವಂತೆ ಸೂಚಿಸಿದ ಬಳಿಕ, ಕೆಲ ಕಾರ್ವಿುಕರು ಕೆಲಸ ಆರಂಭಿಸಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.