ರಸ್ತೆ ಬದಿಗೆ ಮಣ್ಣು, ಸಂಚಾರ ಪ್ರಯಾಸ

ಮುಂಡಗೋಡ: ಪಟ್ಟಣದ ಯಲ್ಲಾಪುರ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಣ್ಣು ಹಾಕಿದ್ದರಿಂದ ಮಳೆಗಾಲದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಟಿಬೆಟಿಯನ್ ಕ್ಯಾಂಪ್ ನಂ. 1ರ ಕ್ರಾಸ್​ನಿಂದ ಬಡ್ಡಿಗೇರಿ ಕ್ರಾಸ್​ವರೆಗೆ ರಸ್ತೆಯ ಎರಡೂ ಬದಿಗೆ ಮಣ್ಣು ಹಾಕಿದ ಪರಿಣಾಮ ಈಗ ಬೀಳುತ್ತಿರುವ ಮಳೆಯಿಂದ ವಾಹನಗಳು ಕೆಸರಿನಲ್ಲಿ ಸಿಲುಕಿ ವಾಹನ ಸವಾರರು ಪರದಾಡುವಂತಾಗಿದೆ. ಇದೇ ಮಣ್ಣು ರಸ್ತೆ ಮೇಲೆ ಹರಡಿ ಹಲವು ಬೈಕ್​ಗಳ ಸವಾರರು ಸ್ಕಿಡ್ ಆಗಿ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ. ಇದಕ್ಕೆ ಉದಾಹರಣೆ ಶುಕ್ರವಾರ ಎದುರಿಗೆ ಬರುತ್ತಿದ್ದ ಲಾರಿಗೆ ದಾರಿ ಬಿಡಲು ಹೋಗಿ ಕೆಎಸ್​ಆರ್​ಟಿಸಿ ಬಸ್ ಕೆಸರಿನಲ್ಲಿ ಸಿಲುಕಿ ತಾಸುಗಟ್ಟಲೇ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಯಿತು.

ರಸ್ತೆ ಇಕ್ಕೆಲಗಳಲ್ಲಿ ಈ ಮಣ್ಣು ಹಾಕುವ ಮೊದಲು ನೆಲ ಗಟ್ಟಿಯಾಗಿತ್ತು. ಅಲ್ಲಲ್ಲಿ ಸಣ್ಣ ಸಣ್ಣ ಗುಂಡಿಗಳು ಮಾತ್ರ ಇದ್ದವು. ಇದೇ ಮಣ್ಣು ಹಾಕುವ ಬದಲು ಗಟ್ಟಿಯಾದ ಕೆಂಪು ಮಣ್ಣನ್ನು ಹಾಕಬಹುದಾಗಿತ್ತು. ಪಿಡಬ್ಲ್ಯುಡಿಯವರು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದರಿಂದ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಈ ರಸ್ತೆಯು ಇಳಕಲ್-ಕೈಗಾ ಹೆದ್ದಾರಿ ಹಾಗೂ ತಾಲೂಕಿನ ಜನರು ಕಾರವಾರಕ್ಕೆ ಹೋಗುವ ರಸ್ತೆ ಆಗಿದ್ದರಿಂದ ವಾಹನಗಳ ಸಂಚಾರ ದಟ್ಟವಾಗಿದೆ. ಇಕ್ಕಟ್ಟಾದ ರಸ್ತೆ ಇದಾಗಿದ್ದರಿಂದ ಮಳೆಗಾಲದಲ್ಲಿ ರಸ್ತೆ ಬಿಟ್ಟು ವಾಹನವನ್ನು ಕೆಳಗೆ ಇಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಆತಂಕ ಜನರದ್ದಾಗಿದೆ.

ಮಳೆಗಾಲದ ವೇಳೆಯಲ್ಲಿ ಮಣ್ಣು ಹಾಕುವ ಅವಶ್ಯಕತೆ ಇರಲಿಲ್ಲ. ಹಿಂದೆ ಈ ರಸ್ತೆ ಚೆನ್ನಾಗಿತ್ತು. ಹದಿನೈದು ದಿನಗಳ ಹಿಂದೆ ರಸ್ತೆಯ ಎರಡೂ ಬದಿ ಪೊಳ್ಳು ಮಣ್ಣನ್ನು ಹಾಕಿದ್ದಾರೆ. ಕೇವಲ ಎರಡು ಬಾರಿ ಸುರಿದ ಮಳೆಗೆ ರಸ್ತೆ ಕೆಸರು ಗುಂಡಿಯಾಗಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಟ್ಟಿಯಾದ ಮಣ್ಣು ಹಾಕಿಸಿ ರೂಲರ್ ಹೊಡಿಸಬೇಕು. | ಉದಯಕುಮಾರ ಉತ್ತಮನ್, ಬಡ್ಡಿಗೇರಿ ಕ್ರಾಸ್ ನಿವಾಸಿ

ಮಳೆಯಾಗಿ ರಸ್ತೆಯ ಬದಿ ಕೆಸರಾಗಿ ತೊಂದರೆಯಾಗಿರುವ ವಿಷಯ ಗೊತ್ತಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಈಗಾಗಲೇ ಕೆಸರಾದ ಮಣ್ಣನ್ನು ತೆಗೆಸಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಪೂರ್ತಿಯಾಗಿ ಮಣ್ಣನ್ನು ತೆಗೆಯಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ. | ದಯಾನಂದ ಬಿ.ಆರ್., ಎಇಇ ಪಿಡಬ್ಲ್ಯುಡಿ

Leave a Reply

Your email address will not be published. Required fields are marked *