ರಸ್ತೆ ದುರಸ್ತಿಗಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿನಿ ಮುಕ್ತಾ

ತುರುವೇಕೆರೆ : ನಮ್ಮ ಶಾಲೆಯ ರಸ್ತೆ ತುಂಬಾ ಹಾಳಾಗಿದೆ. ಮಳೆ ಬಂದರಂತೂ ನಮ್ಮ ಪಾಡು ಆ ದೇವರಿಗೇನೇ ಪ್ರೀತಿ. ದಯಮಾಡಿ ಶಾಲೆ ರಸ್ತೆ ಸರಿ ಮಾಡಿಸಿಕೊಡಿ ಎಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಟ್ಟಣದ ಇಂಡಿಯನ್ ಪಬ್ಲಿಕ್ ಶಾಲೆ ಮುಖ್ಯಮಂತ್ರಿ ಟಿ.ಎನ್.ಮುಕ್ತಾ ಮನವಿ ಮಾಡಿದ್ದಾಳೆ.

ಶಾಲಾ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್, ಹಿರಿಯ ವಿದ್ಯಾರ್ಥಿ ಟಿ.ಎನ್.ಶ್ರೀರಂಗ ಹಾಗೂ ಪಾಲಕರೊಂದಿಗೆ ಬೆಂಗಳೂರಿನ ಮನೆಯಲ್ಲಿ ಗುರುವಾರ ಭೇಟಿ ಮಾಡಿದ ಮುಕ್ತಾ, ಪಟ್ಟಣದ ಹೊರಪೇಟೆ ವಿರಕ್ತ ಮಠದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬಹುತೇಕ ಬಡಾವಣೆಯ ಚರಂಡಿ ನೀರು ಮತ್ತು ಮಳೆ ನೀರು ರಸ್ತೆ ಮೇಲೆ ಹರಿಯುತ್ತದೆ ಎಂದು ಸಮಸ್ಯೆ ವಿವರಿಸಿದ್ದಾಳೆ.

ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ:

ವಿದ್ಯಾರ್ಥಿನಿ ಮುಕ್ತ್ತಾಳ ಸಾಮಾಜಿಕ ಕಳಕಳಿಗೆ ಖುಷಿಗೊಂಡ ಸಿಎಂ ಕುಮಾರಸ್ವಾಮಿ ವಿದ್ಯಾರ್ಥಿನಿಯ ತಲೆ ನೇವರಿಸುತ್ತ ಖಂಡಿತ ಸಮಸ್ಯೆ ಈಡೇರಿಸುತ್ತೇನೆ, ಚಿಂತಿಸಬೇಡ ಎಂದು ಹೇಳಿದರು. ಕೂಡಲೇ ತುಮಕೂರು ಜಿಲ್ಲಾಧಿಕಾರಿಗೆ ಕ್ರಮ ಕೈಗೊಳ್ಳುವಂತೆ ಆಪ್ತ ಕಾರ್ಯದರ್ಶಿಗಳಿಗೆ ಸೂಚಿಸಿದರು.