ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯವನ್ನು ಬೊಮ್ಮನಕಟ್ಟೆ ಸಮೀಪದ ನೂತನ ಕಟ್ಟಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಶುಕ್ರವಾರ ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು.

ವಿದ್ಯಾನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ವಸತಿ ನಿಲಯಗಳಿದ್ದು, ವಾರದ ಹಿಂದಷ್ಟೇ 110 ಮೆಟ್ರಿಕ್​ಪೂರ್ವ ವಿದ್ಯಾರ್ಥಿಗಳನ್ನು ಬೊಮ್ಮನಕಟ್ಟೆ ಸಮೀಪ ನಿರ್ವಿುಸಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಅಲ್ಲಿ ಮೂಲಸೌಕರ್ಯಗಳಿಲ್ಲ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ವಾಪಸ್ ವಿದ್ಯಾನಗರಕ್ಕೆ ಕರೆಸುವಂತೆ ಮನವಿ ಮಾಡಿದ್ದರು.

ಆದರೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ವಿದ್ಯಾರ್ಥಿಗಳ ಮನವಿ ತಿರಸ್ಕರಿಸಿದ್ದರು. ಅಲ್ಲದೆ ವಸತಿ ನಿಲಯಕ್ಕೆ ತುಂಗಾ ನದಿ ನೆರೆ ನುಗ್ಗಿದ ಪರಿಣಾಮ ಕಟ್ಟಡದಲ್ಲಿ ನೀರು ನಿಂತಿತ್ತು. ಇದರಿಂದ ಆತಂಕಗೊಂಡ ವಾರ್ಡನ್ ಮತ್ತು ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದ್ದರು. ಅದಕ್ಕಾಗಿ ಜಿಲ್ಲಾಡಳಿತ ಖಾಸಗಿ ಸಿಟಿ ಬಸ್ ವ್ಯವಸ್ಥೆಯನ್ನೂ ಮಾಡಿತ್ತು.

ನೂತನ ಕಟ್ಟಡದಲ್ಲಿ ಮೂಲ ಸೌಕರ್ಯಗಳಿಲ್ಲ. ಬಹುತೇಕ ಎಲ್ಲ ವಿದ್ಯಾರ್ಥಿಗಳು ಸಹ್ಯಾದ್ರಿ ಕಾಲೇಜು ಮತ್ತು ಮೀನಾಕ್ಷಿ ಭವನ ಎದುರಿನ ಸರ್ಕಾರಿ ಕಾಲೇಜಿಗೆ ತೆರಳುತ್ತಿದ್ದು, ಪ್ರತಿನಿತ್ಯ ಲ್ಯಾಬ್ ಮತ್ತು ತರಗತಿಗಳಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಪೊಲೀಸರ ಅನುಮತಿ ಪಡೆಯದೆ ರಸ್ತೆ ತಡೆ ನಡೆಸಿದರು. ಇದರಿಂದ ಕೆಲಕಾಲ ಗೊಂದಲದ ವಾತವರಣ ಸೃಷ್ಟಿಯಾಗಿತ್ತು. ಜತೆಗೆ ಟ್ರಾಫಿಕ್ ಸಮಸ್ಯೆಯೂ ಉಂಟಾಗಿತ್ತು.

ಅನುಮತಿ ಪಡೆಯದೆ ರಸ್ತೆ ತಡೆ ನಡೆಸಿದ್ದಕ್ಕೆ ವಿದ್ಯಾರ್ಥಿಗಳ ಜತೆ ಪೊಲೀಸರು ವಾಗ್ವಾದ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಡಾ. ಎಚ್.ಟಿ.ಶೇಖರ್, ಡಿವೈಎಸ್ಪಿ ಉಮೇಶ್ ನಾಯ್್ಕ ಸಿಪಿಐ ಅಭಯ್ಪ್ರಕಾಶ್ ಪಾಟೀಲ್ ಮತ್ತಿತರರು ಪರಿಸ್ಥಿತಿ ತಿಳಿಗೊಳಿಸಿದರು.

ಸಮಸ್ಯೆ ಆಲಿಸಿದ ಡಿಸಿ: ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಸಿ ಕೆ.ಬಿ.ಶಿವಕುಮಾರ್ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸದಂತೆ ಬುದ್ಧಿವಾದ ಹೇಳಿದರು. ಜತೆಗೆ ನಗರದಲ್ಲೇ ವಸತಿ ನಿಲಯಕ್ಕೆ ಯೋಗ್ಯವಾದ ಕಟ್ಟಡವಿದ್ದರೆ ಪರಿಶೀಲಿಸಿ ಅಲ್ಲಿಗೆ ಸ್ಥಳಾಂತರ ಮಾಡಿಸುವ ಭರವಸೆ ನೀಡಿದರು.

ವಿದ್ಯಾರ್ಥಿಗಳಾದ ವಿಜಯ್, ಕಿರಣ್, ಸ್ವಾಮಿ, ವಸಂತ್, ವನ್ನೇಶ್, ಮಂಜುನಾಯ್ಕ, ಆನಂದ, ವಿಶ್ವ, ಕೃಷ್ಣ, ಗಿರೀಶ್, ಹರೀಶ್, ನಟರಾಜ್, ಶಿವು, ಅರವಿಂದ್, ಪ್ರತಾಪ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *