ರಸ್ತೆ ಕಾಮಗಾರಿ, ಪರಿಸರಕ್ಕೆ ಮಾರಿ

ಅಕ್ಕಿಆಲೂರ: ಇದು ಕೇವಲ 4 ಕಿ.ಮೀ. ಉದ್ದದ ರಸ್ತೆ. ಆದರೆ, ಅದರ ವಿಸ್ತರಣೆ ಕಾಮಗಾರಿಗೆ ಬಲಿಯಾಗುತ್ತಿರುವುದು ಬರೋಬ್ಬರಿ 95 ಮರಗಳು. ಶತಮಾನಗಳಿಂದ ಜನ- ಜಾನುವಾರು, ಪಕ್ಷಿಗಳಿಗೆ ಆಸರೆಯಾಗಿದ್ದ ಬೃಹತ್ ಮರಗಳ ಮಾರಣಹೋಮ ಸಾರ್ವಜನಿಕರಲ್ಲಿ ಬೇಸರ ತರಿಸಿದೆ.

ಸಮೀಪದ ಕುಂಟನಹೊಸಳ್ಳಿಯ ಬಳಿ ಕೇವಲ 4 ಕಿಲೋ ಮೀಟರ್ ಒಳ ರಸ್ತೆ ವಿಸ್ತರಿಸಲು ತಾಲೂಕು ಲೋಕೋಪಯೋಗಿ ಇಲಾಖೆ 95 ಮರಗಳ ಮಾರಣಹೋಮ ನಡೆಸುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಣ್ಣ ರಸ್ತೆ ಅಭಿವೃದ್ಧಿಗಾಗಿ ಇಷ್ಟೊಂದು ಮರಗಳನ್ನು ಬಲಿ ಪಡೆಯುವ ಅವಶ್ಯಕತೆ ಇದೆಯೇ ಎಂಬುದು ಪ್ರಜ್ಞಾವಂತರ ಪ್ರಶ್ನೆ.

ಹಾನಗಲ್ಲನಿಂದ ಕುಂಟನಹೊಸಳ್ಳಿ ಮಾರ್ಗವಾಗಿ ಅಕ್ಕಿವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 3.50 ಕೋಟಿ ರೂ. ವೆಚ್ಚದಲ್ಲಿ 10 ಮೀಟರ್ ವಿಸ್ತರಿಸುವ ಕಾಮಗಾರಿ ಇದಾಗಿದ್ದು, ಸವಣೂರ ಮೂಲದ ಎಫ್.ವಿ. ಪಾಟೀಲ ಎಂಬುವರಿಗೆ ಗುತ್ತಿಗೆ ನೀಡಲಾಗಿದೆ. ಹಾನಗಲ್ಲ ತಾಲೂಕು ಲೋಕೋಪಯೋಗಿ ಇಲಾಖೆ 95 ಮರಗಳನ್ನು ನೆಲಕ್ಕುರುಳಿಸಲು ಜಿಲ್ಲಾ ಅರಣ್ಯ ಇಲಾಖೆಯಿಂದ 14.20 ಲಕ್ಷ ರೂ. ಪಾವತಿಸಿ ಒಪ್ಪಿಗೆ ಪಡೆದುಕೊಂಡಿದೆ. ಆಲದಮರ, ಅರಳಿ, ಅತ್ತಿ, ಬೇವು, ಅಶ್ವತ್ಥ ಜಾತಿಯ ಮರಗಳನ್ನು ನೆಲಕ್ಕುರುಳಿಸಲಾಗುತ್ತಿದೆ. ಈಗಾಗಲೇ 30 ಮರಗಳನ್ನು ಕಡಿಯಲಾಗಿದ್ದು, ಅವುಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗಿದೆ. ಮರಗಳನ್ನು ಕೆಡವಲು ಜೆಸಿಬಿಗಳು ಹಗಲು ರಾತ್ರಿ ಸದ್ದು ಮಾಡುತ್ತಿವೆ.

50 ವರ್ಷಗಳಿಂದ ಸಾವಿರಾರು ಜೀವಿಗಳಿಗೆ ನೆರಳು ನೀಡಿ, ಸುತ್ತಲಿನ ಪರಿಸರ ಸಮತೋಲನ ಕಾಪಾಡಿಕೊಂಡು ಬಂದಿದ್ದ ಮರಗಳು ಏಕಾಏಕಿ ನಾಶವಾಗುತ್ತಿರುವುದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ. ಮರಗಳನ್ನು ಕಡಿಯಲು ಒಪ್ಪಿಗೆ ನೀಡಿದ ಅರಣ್ಯ ಇಲಾಖೆ ವಿರುದ್ಧ ಕಿಡಿಕಾರುತ್ತಿದ್ದಾರೆ.

ಗಿಡ ನೆಡುವುದು ತೋರಿಕೆಗೆ: ರಸ್ತೆ ಕಾಮಗಾರಿ ಮುಗಿದ ನಂತರ ವಿವಿಧ ಬಗೆಯ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳುವ ಅರಣ್ಯ ಇಲಾಖೆ, ಅವುಗಳ ಪಾಲನೆ, ಪೋಷಣೆ ಮಾಡವಲ್ಲಿ ಮಾತ್ರ ವಿಫಲವಾಗುತ್ತದೆ. ಈ ಹಿಂದೆ ಹಾವೇರಿ-ಶಿರಸಿ ಹೆದ್ದಾರಿ ನಿರ್ವಣದ ನಂತರ ನೆಡಲಾಗಿದ್ದ ಬಹುತೇಕ ಗಿಡಗಳು ಜಾನುವಾರುಗಳ ಆಹಾರವಾಗಿದ್ದವು. ಈಗ ಕುಂಟನಹೊಸಳ್ಳಿ ಬಳಿ ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆಯಾದರೂ ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಅಧಿಕಾರಿಗಳಿಗಿಲ್ಲ ಪರಿಸರ ಪ್ರಜ್ಞೆ!: ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಅಡೆತಡೆಯುಂಟು ಮಾಡುವ ಮರಗಳನ್ನು ನಾಶ ಮಾಡದೇ ಅವುಗಳನ್ನು ಜೆಸಿಬಿ ಸಹಾಯದಿಂದ ಬೇರು ಸಮೇತ ಹೊರತೆಗೆದು ಕ್ರೇನ್ ಮೂಲಕ ಬೇರೆಡೆ ನೆಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಪರಿಸರ ಪ್ರೇಮಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಆದರೆ, ಇಲ್ಲಿಯ ಅಧಿಕಾರಿಗಳಿಗೆ ಇಂತಹ ವಿಷಯ ತಿಳಿಯದೇ ಹೋಯಿತೆ? ತಿಳಿದರೂ ನಿರ್ಲಕ್ಷ್ಯ ವಹಿಸಿ ಮರಗಳಿಗೆ ಮರಣಶಾಸನ ಬರೆದರೇ ಎಂಬ ಪ್ರಶ್ನೆ ಪ್ರಜ್ಞಾವಂತರದ್ದು.

ರಸ್ತೆ ಅಭಿವೃದ್ಧಿಗಾಗಿ ಮರಗಳನ್ನು ಕಡಿಯಲೇಬೇಕಾದ ಅಗತ್ಯವಿದೆ. ಬೇರೆ ದಾರಿ ಇಲ್ಲ. ಕಾನೂನಿನ ಪ್ರಕಾರ ಎಲ್ಲ ಪ್ರಕ್ರಿಯೆ ಮುಗಿಸಿಯೇ ಮರ ಕಡಿಯಲಾಗುತ್ತಿದೆ.
| ನಾಗರಾಜ, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಹಾನಗಲ್ಲ

ರಸ್ತೆ ಕಾಮಗಾರಿಗೆ ಮರ ಕಡಿಯುವ ಅನುಮತಿ ನೀಡುವ ವ್ಯವಸ್ಥೆ ಇದೆ. ಆ ಪ್ರಕಾರ ಜಿಲ್ಲಾ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಕ್ಕಿದೆ. ಮರಗಳನ್ನು ಸ್ಥಳಾಂತರಿಸುವ ಪದ್ಧತಿ ಅಷ್ಟೊಂದು ಫಲಪ್ರದವಾಗಿಲ್ಲ. ಜತೆಗೆ ಹೆಚ್ಚು ಆರ್ಥಿಕ ವ್ಯಯವಾಗುತ್ತದೆ. ಹೀಗಾಗಿ, ಆ ಪದ್ಧತಿ ಅನುಸರಿಸಲಾಗಿಲ್ಲ.
| ಪರಮೇಶ್ವರಪ್ಪ ಪೇಲನವರ, ತಾಲೂಕು ಅರಣ್ಯ ಅಧಿಕಾರಿ, ಹಾನಗಲ್ಲ