ರಸ್ತೆ ಅತಿಕ್ರಮಣ, ಸಂಚಾರಕ್ಕೆ ಸಂಚಕಾರ

ರಾಣೆಬೆನ್ನೂರ: ಇಲ್ಲಿಯ ನಗರಸಭೆ ವಾರ್ಡ್ ನಂ. 16ರ ವ್ಯಾಪ್ತಿಯ ಸಿದ್ಧೇಶ್ವರ ನಗರದ 1ನೇ ಕ್ರಾಸ್​ನ ರಸ್ತೆ ಅತಿಕ್ರಮಣವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ.

ಹಲವು ದಶಕಗಳ ಹಿಂದೆ 30 ಅಡಿ ಅಗಲವಿದ್ದ ರಸ್ತೆ ಇದೀಗ ಕೇವಲ 10 ಅಡಿಯಷ್ಟು ಉಳಿದುಕೊಂಡಿದೆ. ಹೀಗಾಗಿ, ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಇತರ ಯಾವುದೇ ವಾಹನಗಳು ಈ ರಸ್ತೆ ಮಾರ್ಗವಾಗಿ ಸಂಚರಿಸಲು ಆಗದ ಸ್ಥಿತಿಗೆ ತಲುಪಿದೆ.

ಇದೇ ರಸ್ತೆ ಮಾರ್ಗದಲ್ಲಿ ಭಾರತೀಯ ವಿದ್ಯಾ ಸಂಸ್ಥೆಯ ಶಾಲೆ, ಶಿವಾ ಹೈಸ್ಕೂಲ್, ಕೋಟೆ ಸರ್ಕಾರ ಪ್ರಾಥಮಿಕ ಶಾಲೆ ಸೇರಿ ಮೂರ್ನಾಲ್ಕು ಶಾಲೆಯ ಸಾವಿರಕ್ಕೂ ಅಧಿಕ ಮಕ್ಕಳು ಓಡಾಡುತ್ತಾರೆ. ರಸ್ತೆಗೆ ಹೊಂದಿಕೊಂಡು ರಾಜಕಾಲುವೆ ಇರುವುದರಿಂದ ಮಳೆಗಾಲದಲ್ಲಿ ರಸ್ತೆಯು ನೀರಿನಲ್ಲಿ ಮುಳುಗಿ ಹೋಗುತ್ತದೆ. ಇದರಿಂದ ಶಾಲಾ ಮಕ್ಕಳು ಭಾರಿ ತೊಂದರೆ ಎದುರಿಸುವಂತಾಗಿದೆ.

ಈ ಭಾಗದಲ್ಲಿ ಸಾವಿರಾರು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಇದೇ ಮಾರ್ಗವಾಗಿ ಓಡಾಡಬೇಕು. ದೇವರಗುಡ್ಡ ರಸ್ತೆ, ಬಸ್ ನಿಲ್ದಾಣ, ನೆಹರು ಮಾರುಕಟ್ಟೆ ಸೇರಿ ಪ್ರಮುಖ ಬಡಾವಣೆಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆದರೀಗ ರಸ್ತೆ ಅತಿಕ್ರಮಣವಾಗಿರುವ ಕಾರಣ ಜನತೆಗೆ ಓಡಾಡಲು ಆಗದ ಸ್ಥಿತಿ ನಿರ್ವಣವಾಗಿದೆ.

ಕೊಳಚೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ: ಇದೇ ರಸ್ತೆಗೆ ಹೊಂದಿಕೊಂಡಿರುವ ಬಯಲು ಪ್ರದೇಶದಲ್ಲಿ ಸುತ್ತಲಿನ ಕೊಳಚೆ ನೀರು ಸಂಗ್ರಹವಾಗಿದೆ. ಮಳೆಗಾಲದಲ್ಲಿ ಸುತ್ತಮುತ್ತಲಿನ ಪ್ರದೇಶದ ನೀರು ಇಲ್ಲಿಯೇ ಸಂಗ್ರಹವಾಗುವ ಕಾರಣ ರಸ್ತೆಯು ಕೆರೆಯಂತಾಗುತ್ತಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಬಾಲಕನೊಬ್ಬ ಕೊಳಚೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆಯೂ ನಡೆದಿತ್ತು ಎಂದು ಸ್ಥಳೀಯ ನಿವಾಸಿ ವಿನಾಯಕ ಚಿನ್ನಿಕಟ್ಟಿ ತಿಳಿಸಿದ್ದಾರೆ.

ಬಂದ ಹಣ ವಾಪಸ್: ರಸ್ತೆಗೆ ಕಾಂಕ್ರೀಟ್ ಹಾಕುವ ಸಲುವಾಗಿ ನಗರಸಭೆಯಿಂದ ಕಳೆದ ವರ್ಷ 15 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಅತಿಕ್ರಮಣದಾರರು ರಸ್ತೆ ನಿರ್ವಣಕ್ಕೆ ಅಡ್ಡಿಪಡಿಸಿದ್ದರಿಂದ ಇದೇ ಅನುದಾನದಲ್ಲಿ ಬೇರೆಡೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ, ಈ ರಸ್ತೆಯ ಅತಿಕ್ರಮಣ ತೆರೆವುಗೊಳಿಸಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಗೋಜಿಗೆ ನಗರಸಭೆ ಅಧಿಕಾರಿಗಳು ಹೋಗಲಿಲ್ಲ ಎಂಬುದು ವಿಷಾದಕರ ಸಂಗತಿಯಾಗಿದೆ.

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಂದ ಇಂದಿಗೂ ಸಿದ್ಧೇಶ್ವರನಗರದ ಜನತೆ ಪರದಾಡಬೇಕಾದ ಸ್ಥಿತಿಯಿದೆ. ಆದ್ದರಿಂದ ನಗರಸಭೆ ಆಯುಕ್ತರು ಕೂಡಲೆ ಸೂಕ್ತ ಕ್ರಮ ಕೈಗೊಂಡು ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ನಿವಾಸಿಗಳಾದ ಜಿ.ಎಸ್. ಬಣಕಾರ, ಪುಟ್ಟಪ್ಪ ರ್ಬಾ ಇತರರು ಆಗ್ರಹಿಸಿದ್ದಾರೆ.

ಪ್ರಭಾವಿಗಳಿಂದ ಅತಿಕ್ರಮಣ: ಸಿದ್ಧೇಶ್ವರ ನಗರದ 1ನೇ ಕ್ರಾಸ್​ನ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡ ಕೆಲ ಪ್ರಭಾವಿಗಳು ಅನಧಿಕೃತವಾಗಿ ಚುರುಮರಿ ಭಟ್ಟಿ ಹಾಗೂ ಇತರ ಗೂಡಂಗಡಿಗಳನ್ನು ಹಾಕಿಕೊಂಡಿದ್ದಾರೆ. ರಸ್ತೆ ದುರಸ್ತಿಪಡಿಸಲು ಹೋದರೆ ಇವರ ಅಂಗಡಿಗಳನ್ನು ತೆರವುಗೊಳಿಸಬೇಕಾಗುತ್ತದೆ. ಆದ್ದರಿಂದ ರಸ್ತೆ ನಿರ್ವಣಕ್ಕೆ ಇವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸದ್ಯ ಅತಿಕ್ರಮಣವಾದ ರಸ್ತೆ ಬಿಟ್ಟು ಉಳಿದ ರಸ್ತೆಗೆ ಕಾಂಕ್ರೀಟ್ ಹಾಕಿ ಓಡಾಡಲು ಅನುಕೂಲ ಮಾಡಿಕೊಡುವಂತೆ ನಗರಸಭೆಯವರಿಗೆ ಮನವಿ ಮಾಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ.
| ಪಾಂಡುರಂಗ ಗಂಗಾವತಿ, ವಾರ್ಡ್ ಸದಸ್ಯ

ರಸ್ತೆ ದುರಸ್ತಿಗೆ ಕೆಲವರು ತಕರಾರು ಮಾಡಿದ್ದಾರೆ. ಆದ್ದರಿಂದ ಈ ಜಾಗವನ್ನು ಸರ್ವೆ ಮಾಡಿಸಿ, ಅತಿಕ್ರಮಣವಾಗಿದ್ದರೆ ತೆರವುಗೊಳಿಸಿ ನಂತರ ಕಾಂಕ್ರೀಟ್ ರಸ್ತೆ ನಿರ್ವಿುಸುವಂತೆ ಈಗಾಗಲೇ ಸಿಬ್ಬಂದಿಗೆ ಸೂಚಿಸಿದ್ದೇನೆ.
| ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತರು

Leave a Reply

Your email address will not be published. Required fields are marked *