ರಸ್ತೆಯಲ್ಲೇ ವ್ಯಾಪಾರ- ವಹಿವಾಟು

ಬಂಕಾಪುರ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತಿರುವುದರಿಂದ ಪಾದಚಾರಿ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ.

ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಬಂಕಾಪುರ ಪಟ್ಟಣ ಹೋಬಳಿ ಕೇಂದ್ರವಾಗಿದೆ. ನಿತ್ಯ ಸಾವಿರಾರು ಜನ ವ್ಯಾಪಾರ ವಹಿವಾಟು, ಕಚೇರಿ ಕೆಲಸಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಪಟ್ಟಣದ ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚರಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದು, ಪ್ರತಿನಿತ್ಯವೂ ಉಂಟಾಗುವ ಟ್ರಾಫಿಕ್ ಜಾಮ್ಂದ ವಾಹನ ಸವಾರರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.

ರಸ್ತೆ ಅತಿಕ್ರಮಣ, ಸಣ್ಣ ವ್ಯಾಪಾರಸ್ಥರ ಕೈಗಾಡಿಗಳು, ರಸ್ತೆಗಳಲ್ಲಿ ನಿಲ್ಲುವ ದ್ವಿಚಕ್ರ ವಾಹನಗಳು, ಸೂಕ್ತ ಸಂಚಾರ ನಿಯಂತ್ರಣ ಇಲ್ಲದಿರುವುದು, ದೊಡ್ಡ ವಾಹನಗಳ ಪ್ರವೇಶ, ಮುಖ್ಯರಸ್ತೆಗೆ ಹೊಂದಿಕೊಂಡಿರುವ ರಸಗೊಬ್ಬರ ಗೋದಾಮುಗಳು, ವಿದ್ಯುತ್ ಕಂಬಗಳು, ಟಾನ್ಸ್​ಫಾರ್ಮರ್​ಗಳು ಇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ವಿವಿಧ ರಸ್ತೆಗಳಲ್ಲಿ ಸಂಚರಿಸಲು ಅನನುಕೂಲವಾಗುತ್ತಿದೆ.

ಪಟ್ಟಣಕ್ಕೆ ಸಂಚಾರ ಸಮಸ್ಯೆಯು ರೋಗದಂತೆ ಕಾಡುತ್ತಿದೆ. ಮೊದಲೇ ಚಿಕ್ಕದಾದ ರಸ್ತೆಗಳು, ಅದನ್ನೂ ವ್ಯಾಪಾರಸ್ಥರು ಅತಿಕ್ರಮಿಸಿದ್ದಾರೆ. ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುತ್ತಿದ್ದಾರೆ. ಪಾದಚಾರಿಗಳ ಮಾರ್ಗ ಬಹತೇಕ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಹೃದಯ ಭಾಗವಾದ ನಾಡಕಚೇರಿ, ಹೈಸ್ಕೂಲ್ ರಸ್ತೆ, ರೇಣುಕಾ ಟಾಕೀಸ್, ಶಹಬಜಾರ, ಆಸಾರ ಸರ್ಕಲ್, ಸಮುದಾಯ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ ರಸ್ತೆಗಳು ಅಂಗಡಿಕಾರರು, ಪ್ರಭಾವಿಗಳಿಂದ ಒತ್ತುವರಿಯಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಆಸಾರ ಸರ್ಕಲ್​ನಿಂದ ಬಸ್ ನಿಲ್ದಾಣದ ರಸ್ತೆ ಉದ್ದಕ್ಕೂ ದಿನಕ್ಕೊಂದು ಮಾಂಸದ ಅಂಗಡಿ, ಬಿರಿಯಾನಿ ಹೋಟೆಲ್, ಗ್ಯಾರೇಜ್ ತಲೆಯೆತ್ತುತ್ತಿವೆ. ಇಷ್ಟೆಲ್ಲ ತೊಂದರೆ ಇದ್ದರೂ ಸಮಸ್ಯೆಯತ್ತ ಗಮನಹರಿಸಬೇಕಾದ ಪುರಸಭೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟು ಮಾಡಿದೆ.

ರಸ್ತೆಗಳ ಉದ್ದಕ್ಕೂ ಗಾಡಾ ಮತ್ತು ಅಂಗಡಿಗಳಿಗೆ ಪರವಾನಗಿ ನೀಡುವ ಪುರಸಭೆ, ತಮ್ಮ ಆದಾಯ ಹೆಚ್ಚಿಸಿಕೊಳ್ಳುತ್ತಿದೆಯೇ ಹೊರತು ಸಂಚಾರ ವ್ಯವಸ್ಥೆ ಸರಿಪಡಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಜೊತೆಗೆ ನೆಹರು ಗಾರ್ಡನ್​ನ ಖಾಲಿ ಜಾಗ, ಪುರಸಭೆ ಪಕ್ಕದ ಖಾಲಿ ಜಾಗದಲ್ಲಿ ಅಥವಾ ಸಮ ಮತ್ತು ಬೆಸ ಸಂಖ್ಯೆ ರೀತಿಯಲ್ಲಿ ವಾಹನಗಳ ರ್ಪಾಂಗ್ ವ್ಯವಸ್ಥೆ ಕಲ್ಪಿಸಿ ತೊಂದರೆ ನಿವಾರಿಸಬಹುದು ಎಂಬುದು ಪ್ರಜ್ಞಾವಂತ ಆಗ್ರಹವಾಗಿದೆ.

ಪೊಲೀಸರಿಗೆ ಮನವಿ ಸಲ್ಲಿಸಿ ಅವರ ಸಹಕಾರದೊಂದಿಗೆ ಪುಟ್​ಪಾತ್ ಅತಿಕ್ರಮಿಸಿರುವ ಅಂಗಡಿ, ಗಾಡಾಗಳನ್ನು ತೆರವುಗೊಳಿಸಲಾಗುವುದು. ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗದಂತೆ ಸಂಚಾರ ಸಮಸ್ಯೆ ಬಗೆಹರಿಸಲಾಗುವುದು.
| ಪ್ರಸನ್ನ ಕಲ್ಯಾಣಶೆಟ್ಟರ ಮುಖ್ಯಾಧಿಕಾರಿ

Leave a Reply

Your email address will not be published. Required fields are marked *