ರಸ್ತೆಯಲ್ಲಿ ಗೋವಿನಜೋಳ ಕಣ

ಅಕ್ಕಿಆಲೂರ: ಗ್ರಾಮೀಣ ಭಾಗಗಳ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿ ರಸ್ತೆ ನಿರ್ವಿುಸಿದೆ. ಆದರೆ, ಆ ರಸ್ತೆಗಳಲ್ಲಿ ಸಂಚಾರದ ಬದಲು ಕಾಳುಗಳನ್ನು ಒಣಹಾಕಲಾಗುತ್ತಿದೆ.

ಅಕ್ಕಿಆಲೂರಿನಿಂದ ಶ್ಯಾಡಗುಪ್ಪಿ, ಮಲಗುಂದ, ಸುರಳೇಶ್ವರ, ಅರಳೇಶ್ವರ ಸೇರಿ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಈ ಸ್ಥಿತಿ ನಿತ್ಯ ಕಂಡು ಬರುತ್ತಿದೆ.

ಕೆಲ ಜಮೀನುದಾರರು ರಸ್ತೆಯ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಗೋವಿನಜೋಳ ಮತ್ತು ಇತರ ಬೆಳೆಗಳನ್ನು ಒಣ ಹಾಕುತ್ತಿದ್ದಾರೆ. ಅಲ್ಲದೆ, ಬೆಳೆ ರಕ್ಷಣೆಗಾಗಿ ದೊಡ್ಡ-ದೊಡ್ಡ ಕಲ್ಲುಗಳನ್ನು ಇಡುತ್ತಾರೆ. ಇದರಿಂದ ಅಪಾಯ ಸಂಭವಿಸುತ್ತಿದ್ದು, ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.

ಗೋವಿನಜೋಳ ಸಂಪೂರ್ಣ ಒಣಗುವವರೆಗೆ ವಾರದವರೆಗೂ ರಸ್ತೆಯಲ್ಲಿ ಬೆಳೆಗಳನ್ನು ಹಾಕಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಬೆಳೆ ರಕ್ಷಣೆಗಾಗಿ ಗೋವಿನಜೋಳದ ರಾಶಿ ಮೇಲೆ ತಾಡಪತ್ರೆ ಮುಚ್ಚುತ್ತಾರೆ. ರಸ್ತೆ ತಿರುವು ಇದ್ದ ಕಡೆಯೂ ಬೆಳೆ ಒಣಹಾಕಿದ ಪರಿಣಾಮ ಅಪಘಾತಗಳು ಸಂಭವಿಸುತ್ತಿವೆ. ಕೆಲ ಜಮೀನುದಾರರು ಹೊಲದಿಂದ ನೇರವಾಗಿ ಗೋವಿನಜೋಳ ತೆನೆಗಳನ್ನು ರಸ್ತೆಗೆ ತಂದು ಒಕ್ಕಲು ಮಾಡುತ್ತಾರೆ.

ಬೇಗ ಒಣಗುತ್ತವೆ: ದಿನೇ ದಿನೆ ಬಿಸಿಲಿ ತಾಪ ಹೆಚ್ಚಾದ ಕಾರಣ ರಸ್ತೆ ಕೂಡ ಹೆಚ್ಚು ಕಾಯುತ್ತದೆ. ಹೀಗಾಗಿ ಕಾದ ರಸ್ತೆಯಲ್ಲಿ ಬೆಳೆಗಳನ್ನು ಹಾಕಿದರೆ ಬೇಗ ಒಣಗುತ್ತವೆ. ಅಲ್ಲದೆ, ಗೋವಿನಜೋಳ ಸಂಪೂರ್ಣ ಒಣಗಿದರೆ ಉತ್ತಮ ದರ ದೊರೆಯುತ್ತದೆ. ಹೀಗಾಗಿ ಹೆಚ್ಚಿನ ರೈತರು ರಸ್ತೆಯಲ್ಲಿ ಬೆಳೆಗಳನ್ನು ಒಣಗಿಸುತ್ತಾರೆ.

ರಸ್ತೆಯ ಅರ್ಧದಷ್ಟು ಭಾಗ ಅತಿಕ್ರಮಿಸಿದ ಪರಿಣಾಮ ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಒಂದೆ ಸಮಯಕ್ಕೆ ಎರಡು ಕಡೆ ವಾಹನಗಳು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಒಣಹಾಕುವವರು ಇದನ್ನು ಅರಿಯಬೇಕು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. 
| ಪ್ರದೀಪ ಮಹೇಂದ್ರಕರ, ವಾಹನ ಸವಾರ.

ರಸ್ತೆಗಳಲ್ಲಿ ಗೋವಿನಜೋಳ ಒಣಹಾಕುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಮಂತಗಿ, ಬೊಮ್ಮನಳ್ಳಿ, ಅರಳೇಶ್ವರ ಭಾಗದ ರಸ್ತೆಗಳಲ್ಲಿ ಅಧಿಕವಾಗಿ ಒಣಹಾಕುತ್ತಿದ್ದಾರೆ. ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಆದರೆ, ಯಾವುದೇ ಸ್ಪಂದನೆ ದೊರೆತಿಲ್ಲ. ಒಣಹಾಕಿದ ವ್ಯಕ್ತಿ ಸೂಚನೆ ನೀಡಿದರೆ, ಪ್ರಭಾವಿ ವ್ಯಕ್ತಿಗಳಿಂದ ಫೋನ್ ಮಾಡಿಸುತ್ತಾರೆ. ಅಲ್ಲದೆ, ಇಲಾಖೆಯಿಂದಲೇ ನಮಗೆ ಸಹಕಾರ ಸಿಗುತ್ತಿಲ್ಲ.
| ಗೋವಿಂದ ಚಪ್ಪರದ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಹಾನಗಲ್ಲ