ಹುಬ್ಬಳ್ಳಿ: ಅಶೋಕನಗರ ರೈಲ್ವೆ ಸೇತುವೆ ಬಳಿಯಿಂದ ಭವಾನಿನಗರಕ್ಕೆ ತೆರಳುವ ರಸ್ತೆಯಲ್ಲಿ ಗುಂಡಿ ನಿರ್ವಣವಾಗಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ.

ಅಶೋಕನಗರ ರೈಲ್ವೆ ಸೇತುವೆವರೆಗೆ ಕಾಂಕ್ರೀಟ್ ರಸ್ತೆ ನಿರ್ವಣವಾಗಿದೆ. ಭವಾನಿನಗರ ನಾಲಾ ಬಳಿಯಿಂದ ದುರ್ಗಾ ಬೇಕರಿ ಮಾರ್ಗವಾಗಿ ಬಾರಾಕೋಟ್ರಿಯವರೆಗೆ ಕಾಂಕ್ರೀಟ್ ರಸ್ತೆ ಇದೆ. ರೈಲ್ವೆ ಸೇತುವೆಯಿಂದ ಭವಾನಿನಗರ ನಾಲಾವರೆಗೆ ಡಾಂಬರ್ ರಸ್ತೆ ಇದ್ದು, ಮಳೆಗಾಲದಲ್ಲಿ ಹಾಳಾಗಿದೆ. ಇತ್ತೀಚೆಗೆ ರಸ್ತೆಯ ಎರಡು ಬದಿ ಗಟಾರ ಹಾಗೂ ಯುಜಿಡಿ ಕಾಮಗಾರಿ ನಡೆಸಲಾಗಿತ್ತು. ಇದರಿಂದ ರಸ್ತೆ ಇನ್ನಷ್ಟು ದುರ್ಬಲಗೊಂಡಿದ್ದು, ತಗ್ಗು ಗುಂಡಿಗಳಿದ್ದು ಕೂಡಿವೆ. ಇತ್ತೀಚೆಗೆ ಸತತ ಮಳೆಯಿಂದ ರಸ್ತೆ ಇನ್ನಷ್ಟು ಹದಗೆಟ್ಟಿದೆ.
ರಸ್ತೆಯಲ್ಲಿ ದೊಡ್ಡದಾದ ಗುಂಡಿ ನಿರ್ವಣವಾಗಿದ್ದು, ವಾಹನ ಚಾಲನೆ ಅಪಾಯಕಾರಿಯಾಗಿದೆ. ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ವಾಹನ ಚಾಲನೆ ಮಾಡಬೇಕಾದ ಸ್ಥಿತಿ ಇದೆ. ಎಚ್ಚರ ತಪ್ಪಿದರೆ ಅಪಾಯ ಖಂಡಿತ. ಈಗಾಗಲೇ ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ.
ಗುಂಡಿ ಮುಚ್ಚುವ ಪ್ರಯತ್ನ ಪಾಲಿಕೆ ಮಾಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.