ಹೂವಿನಹಡಗಲಿ: ಗ್ಯಾರಂಟಿಗಳಿಗೆ ಸೀಮಿತವಾಗಿರುವ ರಾಜ್ಯ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಶಾಂತವೀರ ಸಮುದಾಯ ಭವನದಲ್ಲಿ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಸಹಕಾರ ಸಂಘಗಳ ಪ್ರತಿನಿಧಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಹಾಗೂ ಖನಿಜ ನಿಧಿ ಬಿಟ್ಟರೆ ಬೇರೆ ಅನುದಾನ ದೊರೆಯುತ್ತಿಲ್ಲ. ರಸ್ತೆಗಳಿಗೆ ತೆಪೆ ಹಾಕಲು ಹಣವಿಲ್ಲ ಎಂದು ಹೇಳಿದರು.
ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಸಿಡಿದೇಳುವ ಕಾಲ ಹತ್ತಿರದಲ್ಲಿದೆ. ಮಸೂದೆಗಳನ್ನು ಪಾಸ್ ಮಾಡಲು ಅಧಿವೇಶನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಈಗಲೇ ಚುನಾವಣೆ ನಡೆದರೆ 130 ಜನ ಬಿಜೆಪಿ ಶಾಸಕರು ಆಯ್ಕೆಯಾಗುತ್ತಾರೆ. ಸಹಕಾರಿ ಸಂಘದಲ್ಲಿನ ಸೋಲುಗಳಿಂದ ಯಾರೂ ವಿಚಲಿತರಾಗದೆ ಮುಂಬರುವ ಸ್ಥಳೀಯ ಸಂಸ್ಥೆಯ ಚುನವಾಣೆಗಳನ್ನು ಎದುರಿಸಲು ಸಿದ್ಧರಾಗಬೇಕು. ಎಲ್ಲರೂ ಪಕ್ಷ ಸಂಘಟನೆಗೆ ಮುಂದಾಗಬೇಕು. ಕಾರ್ಯಕರ್ತರು ಹತಾಶರಾಗಬಾರದು ಎಂದರು. ವಕೀಲ ಎಂ.ಪರಮೇಶ್ವರಪ್ಪ, ಜಿಬಿಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನರೆಡ್ಡಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ.ಬಿ.ವೀರಭದ್ರಪ್ಪ ಇದ್ದರು.