ರಸ್ತೆಗಿಲ್ಲ ವೈಟ್​ಟಾಪಿಂಗ್! ಪರಿಷ್ಕೃತ ಕ್ರಿಯಾಯೋಜನೆಗೆ ಅನುಮೋದನೆ: ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು

ಬೆಂಗಳೂರು: ಹಿಂದಿನ ಸರ್ಕಾರ ಕೈಗೊಂಡ ಯೋಜನೆಗಳ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ, ಇದೀಗ ಕ್ರಿಯಾ ಯೋಜನೆ ಬದಲಿಸಿದೆ. ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಲ್ಲಿನ ಕಾಮಗಾರಿಗಳ ಅನುದಾನವನ್ನು ಮರುಹಂಚಿಕೆ ಮಾಡಿ ಪರಿಷ್ಕೃತ ಕ್ರಿಯಾಯೋಜನೆಗೆ ಅನುಮೋದನೆ ನೀಡಿದೆ.

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬಜೆಟ್ ಮಂಡನೆ ವೇಳೆ ನವ ಬೆಂಗಳೂರು ಯೋಜನೆ ಅಡಿಯಲ್ಲಿ 8,015.37 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳನ್ನು ಘೋಷಿಸಿತ್ತು. 2019ರ ಫೆ.1ರಂದು ಆ ಯೋಜನೆಗಳಿಗೆ ಸಂಬಂಧಿಸಿದ ಕ್ರಿಯಾಯೋಜನೆಗೂ ಅನುಮೋದನೆ ನೀಡಲಾಗಿತ್ತು. ಈಗ ದುಬಾರಿ ಯೋಜನೆಗಳಿಗೆ ಬ್ರೇಕ್ ಹಾಕಲಾಗಿದ್ದು, ಆ ಹಣವನ್ನು ಮೂಲಸೌಕರ್ಯ ಕಲ್ಪಿಸಲು ಮೀಸಲಿರಿಸಲಾಗಿದೆ.

ರಸ್ತೆ ಅಭಿವೃದ್ಧಿಗೆ ಒತ್ತು: ಪರಿಷ್ಕೃತ ಕ್ರಿಯಾ ಯೋಜನೆ ಪ್ರಕಾರ ವೈಟ್ ಟಾಪಿಂಗ್​ಗೆ ಮೀಸಲಿಟ್ಟ 1,172 ಕೋಟಿ ರೂ. ಮೊತ್ತವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಆ ಮೂಲಕ ವೈಟ್​ಟಾಪಿಂಗ್ ಯೋಜನೆಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ರಸ್ತೆ ಅಭಿವೃದ್ಧಿಗೆ ಹಿಂದೆ 2,247.68 ಕೋಟಿ ರೂ. ನಿಗದಿ ಮಾಡಲಾಗಿತ್ತು. ಅದಕ್ಕೆ ಹೆಚ್ಚುವರಿಯಾಗಿ 1,859.32 ರೂ. ಸೇರಿಸಿ ಒಟ್ಟು 4,107.34 ಕೋಟಿ ರೂ. ತೆಗೆದಿರಿಸಲಾಗಿದೆ. 110 ಹಳ್ಳಿಗಳಿಗೆ ಮೀಸಲಿಟ್ಟ ಅನುದಾನವನ್ನು 275 ಕೋಟಿ ರೂ.ಗಳಿಂದ 364.9 ಕೋಟಿ ರೂ.ಗೆ ಮತ್ತು ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆಗೆ 247.95 ಕೋಟಿ ರೂ.ಗಳಿಂದ 833.97 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಉಳಿದಂತೆ ರಾಜಕಾಲುವೆ ನಿರ್ವಹಣೆ, ಭೂಸ್ವಾಧೀನ, ಬಿಡಿಎ ಯೋಜನೆಗಳು, ಎನ್​ಎಎಲ್ ವಿಂಡ್ ಟವರ್ ರಸ್ತೆಗಳ ಅಭಿವೃದ್ಧಿ ಮತ್ತಿತರ ಯೋಜನೆಗಳ ಅನುದಾನ ಕಡಿತಗೊಳಿಸಲಾಗಿದೆ.

ಅನುದಾನ ವಾಪಸ್: ಮೈತ್ರಿ ಸರ್ಕಾರದ ಕ್ರಿಯಾ ಯೋಜನೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ವಿವೇಚನಾಧಿಕಾರ ಬಳಸಿ ಕೈಗೊಳ್ಳುವ ಕಾಮಗಾರಿಗಳಿಗೆ 500 ಕೋಟಿ ರೂ. ಮೀಸಲಿರಿಸಲಾಗಿತ್ತು. ಆದರೆ, ಪರಿಷ್ಕೃತ ಕ್ರಿಯಾ ಯೋಜನೆಯಲ್ಲಿ ಅದನ್ನು ಹಿಂಪಡೆದು ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ.

ನಾಲ್ಕು ಯೋಜನೆಗಳ ಸೇರ್ಪಡೆ

ಹಿಂದಿನ ಕ್ರಿಯಾ ಯೋಜನೆಯಲ್ಲಿ ಇಲ್ಲದ 4 ಹೊಸ ಯೋಜನೆಗಳನ್ನು ಪರಿಷ್ಕೃತ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದೆ. ಅದರಂತೆ ಹೊರವರ್ತಲ ರಸ್ತೆಯಲ್ಲಿರುವ ಸಂಘ – ಸಂಸ್ಥೆಗಳ (ಒಆರ್​ಆರ್​ಸಿಎ) ಮನವಿ ಮೇರೆಗೆ ರಸ್ತೆಗಳ ಅಭಿವೃದ್ಧಿ ಮಾಡಲು 250 ಕೋಟಿ ರೂ., ಕಡಿಮೆ ವೆಚ್ಚದಲ್ಲಿ ಕೆಲ ರಸ್ತೆಗಳನ್ನು ವೈಟ್​ಟಾಪಿಂಗ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು 50 ಕೋಟಿ ರೂ., ಮೆಕಾನಿಕಲ್ ಸ್ವೀಪಿಂಗ್ ಯಂತ್ರಗಳ ಖರೀದಿಗೆ 25 ಕೋಟಿ ರೂ. ಮತ್ತು ಒಣತ್ಯಾಜ್ಯ ಸಂಗ್ರಹ ಘಟಕಗಳನ್ನು ಮೇಲ್ದರ್ಜೆಗೇರಿಸಲು 3.50 ಕೋಟಿ ರೂ. ನಿಗದಿ ಮಾಡಲಾಗಿದೆ. ಕೆಂಪೇಗೌಡ ಪ್ರತಿಷ್ಠಾನದ ಅಭಿವೃದ್ಧಿಗೆ 100 ಕೋಟಿ ರೂ. ನಿಗದಿ ಮಾಡಲಾಗಿದೆ.

 

Leave a Reply

Your email address will not be published. Required fields are marked *