ಚಿತ್ರದುರ್ಗ: ಮುಂಗಾರು ಹಂಗಾಮಿನಲ್ಲಿ ಯಾವುದೇ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸುವ ಕುರಿತು ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ ಅಲ್ಪ ಪ್ರಮಾಣದಲ್ಲಿ ರಸಗೊಬ್ಬರ ಕೊರತೆ ಉಂಟಾಗಿತ್ತು. ಕೂಡಲೇ ಹೆಚ್ಚುವರಿ ರಸಗೊಬ್ಬರ ತರಿಸಿ ವಿತರಿಸಲಾಗಿತ್ತು ಎಂದರು.
ಅಂತಹ ಪರಿಸ್ಥಿತಿ ಈ ಬಾರಿ ತಲೆದೋರಬಾರದು. ಅಗತ್ಯಕ್ಕಿಂತ ಶೇ.25 ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ, ಡಿಎಪಿ ದಾಸ್ತಾನಿಗೆ ಅಧಿಕಾರಿಗಳು ಹಾಗೂ ಮಾರಾಟಗಾರರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ರಸಗೊಬ್ಬರ ಮಾರಾಟದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ದಾಸ್ತಾನು ವಿವರ ಪ್ರತಿ ಅಂಗಡಿ ಸೂಚನಾ ಫಲಕದಲ್ಲಿರಲಿ, ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೀಟನಾಶಕ ಒದಗಿಸುವುದು ಕೃಷಿ ಇಲಾಖೆಯ ಕರ್ತವ್ಯವಾಗಿದೆ ಎಂದರು.
ವಿಶ್ಲೇಷಣೆಗೆ ಸೂಚನೆ:
ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಂದ ವಿಶ್ಲೇಷಣೆಗೆ ಒಳಪಡಿಸಬೇಕು. ಕಳಪೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು. ಬಿತ್ತನೆ ಬೀಜ ಸರಬರಾಜು ಕಂಪನಿ, ಮಾರಾಟಗಾರರ ವಿವರ ದಾಖಲೆ ಸಹಿತ ಸಂಗ್ರಹಿಸಿಡಬೇಕು. ಬಿತ್ತನೆ ಬೀಜದ ಗುಣಮಟ್ಟದ ಕುರಿತು ದೂರು ಬಂದರೆ, ಕ್ರಮಕೈಗೊಳ್ಳಬೇಕು. ಯಾವ ಕಾರಣಕ್ಕಾಗಿ, ಯಾವ ಹಂತದಲ್ಲಿ ಬೆಳವಣಿಗೆ, ಇಳುವರಿ ಕಡಿಮೆಯಾಗಿದೆ ಎಂಬುದನ್ನು ತಾಂತ್ರಿಕವಾಗಿ ಪತ್ತೆ ಹಚ್ಚಿ ರೈತರಿಗೆ ತಿಳಿಸಬೇಕು ಎಂದು ಡಿಸಿ ಹೇಳಿದರು.
ಪ್ರಕೃತಿಸ್ನೇಹಿ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಅರಿವು ಮೂಡಿಸಬೇಕು. ಜಿಲ್ಲೆಯ ನೈಸರ್ಗಿಕ ಹವಾಮಾನ, ಮಳೆ ಪ್ರಮಾಣ, ಭೂಮಿ ಫಲವತ್ತತೆ, ನೀರಿನ ಲಭ್ಯತೆ ಆಧರಿಸಿದ ಬೆಳೆಗಳ ಕುರಿತು ತಿಳಿಸಬೇಕು. ಅತಿ ಕಡಿಮೆ ಮಳೆ ಬೀಳುವ, ಅಧಿಕ ಉಷ್ಣಾಂಶವಿರುವ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ರೈತರು ಅಡಕೆ ತೋಟ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದ್ದು, ವೈಜ್ಞಾನಿಕ ಕೃಷಿ ಪದ್ಧತಿಗಳ ಅಳವಡಿಕೆಗೆ ರೈತರನ್ನು ಪ್ರೇರೆಪಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 23 ಖಾಸಗಿ, 6 ಸಹಕಾರಿ ಸಂಘ ಸೇರಿ 29 ಸಗಟು ರಸಗೊಬ್ಬರ ಮಾರಾಟಗಾರರು, 405 ಖಾಸಗಿ, 64 ಸಹಕಾರಿ ಸಂಘ, 30 ಎಫ್‌ಪಿಒ ಸೇರಿ 499 ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಇದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಮಾಹಿತಿ ನೀಡಿದರು.
ದಾವಣಗೆರೆ, ಶಿವಮೊಗ್ಗ ಮತ್ತು ಹಾವೇರಿ ರೈಲ್ವೆ ರೇಕ್ ಪಾಯಿಂಟ್‌ಗಳಿಂದ ಜಿಲ್ಲೆಯ ರಸಗೊಬ್ಬರಗಳನ್ನು ಸರಬರಾಜು ಸಂಸ್ಥೆಗಳು ಪಡೆದುಕೊಳ್ಳುತ್ತಿವೆ. ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರದ ಅಕ್ರಮ ಸಾಗಾಣಿಕೆ ಮತ್ತು ಕೃಷಿಯೇತರ ಚಟು ವಟಿಕೆಗಳಿಗೆ ಬಳಕೆ ನಿಯಂತ್ರಿಸುವ ಕುರಿತು ಚರ್ಚಿಸಲಾಯಿತು.
ಎಸಿ ಮೆಹಬೂಬ್ ಜಿಲಾನ್ ಖುರೇಶಿ, ಕೃಷಿ ಇಲಾಖೆ ಉಪ ನಿರ್ದೇಶಕರಾದ ಶಿವಕುಮಾರ್, ಪ್ರಭಾಕರ್, ರಸಗೊಬ್ಬರ ಮಾರಾಟಗಾರರು ಇದ್ದರು.
ಜಿಲ್ಲೆಯಲ್ಲಿ ಸದ್ಯಕ್ಕೆ ಲಭ್ಯವಿರುವ ರಸಗೊಬ್ಬರ (ಮಾ.10ರ ಅಂತ್ಯಕ್ಕೆ)
ರಸಗೊಬ್ಬರ-ಮೆಟ್ರಿಕ್ ಟನ್
ಯೂರಿಯಾ-5615
ಡಿಎಪಿ-2385
ಎಂಒಪಿ-887
ಕಾಂಪ್ಲೆಕ್ಸ್-7981
ಎಸ್‌ಎಸ್‌ಪಿ-265
—-
