ರತಿ-ಮನ್ಮಥರಿಂದ ಮತದಾನ ಜಾಗೃತಿ!

ಹಾನಗಲ್ಲ: ಪಟ್ಟಣದ ವೈದ್ಯರ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ಹೋಳಿಕಾಮನ ಮಂಟಪ ಚುನಾವಣಾ ಜಾಗೃತಿ ಕೇಂದ್ರವಾಗಿ ಪರಿವರ್ತನೆಗೊಂಡಿದ್ದು, ನಿತ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಯಾವುದೇ ಹಬ್ಬ, ಸಂಪ್ರದಾಯಗಳ ಆಚರಣೆಗೆ ನಿಜವಾದ ಅರ್ಥ ಬರುವುದಾದರೆ ಅದಕ್ಕೊಂದು ಸಾರ್ವಜನಿಕ ರೂಪ ನೀಡಲೇಬೇಕು. ಈ ಹಿನ್ನೆಲೆಯಲ್ಲಿ ಹೋಳಿ ಆಚರಣೆಯಲ್ಲಿ ಪಟ್ಟಣದ ಯುವಕರು ಮತದಾನ ಪ್ರಮಾಣ ಹೆಚ್ಚಿಸುವ ಬರಹ, ಕಡ್ಡಾಯ ಮತದಾನ ಪ್ರಕಟಣೆ ಒಳಗೊಂಡ ಮಂಟಪ ರಚಿಸಿ ಅದರಲ್ಲಿ ರತಿ-ಕಾಮರನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.

ಮಂಟಪಕ್ಕೆ ಅಳವಡಿಸಲಾಗಿರುವ ಫ್ಲೆಕ್ಸ್​ಗಳಲ್ಲಿ ನಿಮ್ಮ ಮತ ದೇಶದ ಭವಿಷ್ಯ ರೂಪಿಸುತ್ತದೆ. ನಿಮ್ಮ ಮತ ನಿಮ್ಮ ಹಕ್ಕು, ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಿ. ಮತಗಟ್ಟೆಯೇ ವಿಹಾರ ತಾಣವಾಗಲಿ. ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಮತದಾನದಲ್ಲಿ ಪಾಲ್ಗೊಳ್ಳಿ. ಮತದಾನದಲ್ಲಿ ಭಾಗವಹಿಸಿ-ಪ್ರಜಾಪ್ರಭುತ್ವ ಉಳಿಸಿ. ಉಜ್ವಲ ಭವಿಷ್ಯಕ್ಕಾಗಿ ಬೆರಳಿಗೆ ಇಂಕು-ಪ್ರಜಾಪ್ರಭುತ್ವಕ್ಕೆ ಲಿಂಕು ಇಂಥ ಘೊಷಣೆಗಳನ್ನು ಪ್ರಕಟಿಸಲಾಗಿದೆ. ಇದಲ್ಲದೆ, ಅಣಕು ಮತದಾನದ ಪ್ರಕ್ರಿಯೆ ಚಿತ್ರಗಳು. ಮತದಾರರ ಪ್ರತಿಜ್ಞಾವಿಧಿ ಪ್ರಕಟಿಸಲಾಗಿದೆ. ಒಟ್ಟಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ರತಿ, ಮನ್ಮಥರೂ ತಮ್ಮ ಜವಾಬ್ದಾರಿ ಮೆರೆದಿದ್ದಾರೆ ಎನ್ನಲಾಗುತ್ತಿದೆ.

ಮತದಾನ ಪ್ರಾತ್ಯಕ್ಷಿಕೆ: ಹೋಳಿ ಹಬ್ಬದ ಕಾಮನ ಮಂಟಪದ ಎದುರು ಸ್ಥಳೀಯ ಪುರಸಭೆ ಸಿಬ್ಬಂದಿ ಮತದಾನ ಜಾಗೃತಿಗಾಗಿ ಶುಕ್ರವಾರ ಪ್ರಾತ್ಯಕ್ಷಿಕೆ ನಡೆಸಿದರು. ನಿವೃತ್ತ ಶಿಕ್ಷಕ ಜಿ.ಆರ್. ಪೋತದಾರ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ವೀಪ್ ಯೋಜನೆ ಅಧಿಕಾರಿಗಳಾದ ನಾಗರಾಜ ಮಿರ್ಜಿ, ಶಿವಾನಂದ ಕ್ಯಾಲಕೊಂಡ, ದುರ್ಗಾರಾಮ ಉತಳೇಕರ, ಜಯಶ್ರೀ ಕೋರಿ, ಚಂಪಕ್ಕ ಸುಗಾವಿ, ಮಂಜುನಾಥ ದೊಡ್ಡಮನಿ, ಎ.ಎ. ಉಪ್ಪಿನ, ಫಕೀರೇಶ ಹರಿಜನ ಹಾಗೂ ಕಾಮಣ್ಣನ ಸಮಿತಿ ಸದಸ್ಯರಾದ ವಾದಿರಾಜ ಮಡಿ, ರವಿಚಂದ್ರ ಪುರೋಹಿತ, ಆನಂದ ಗಾಜಿಪುರ, ವಿನಯ ಕಮಡೊಳ್ಳಿ, ದತ್ತಾತ್ರೇಯ ಕುಲಕರ್ಣಿ, ಶ್ರೀನಿವಾಸ ಬಂಕನಾಳ, ಪ್ರಶಾಂತ ಕಾಮನಹಳ್ಳಿ, ಅಭಿನಂದನ ಕಾಮನಹಳ್ಳಿ ಇತರರು ಇದ್ದರು.