ರಣ ಬಿಸಿಲಿನಲ್ಲೂ ಕುಗ್ಗದ ಮತೋತ್ಸಾಹ

ಗೌರಿಬಿದನೂರು: ರಣ ಬಿಸಿಲಿನಲ್ಲೂ ಮತೋತ್ಸಾಹ, ಅನಾರೋಗ್ಯ ನಡುವೆಯೂ ಮತ ಹಾಕಿದ 94 ವರ್ಷದ ಹಿರಿಯ ರಾಜಕಾರಣಿ, ಹಲವೆಡೆ ಮತದಾನ ಪ್ರಕ್ರಿಯೆ ವಿಳಂಬ, ಕಾದು ಕುಳಿತ ಕೃಷಿ ಸಚಿವ, ಮತದಾರನ ಓಲೈಕೆಗೆ ಕೊನೆಯವರೆಗೆ ಕಾರ್ಯಕರ್ತರ ಕಸರತ್ತು… ಇವು ತಾಲೂಕಿನ ಲೋಕಸಭೆ ಚುನಾವಣೆ ವಿಶೇಷತೆ.

ಬಿಸಿಲು ಹಾಗೂ ಕೆಲಸಕ್ಕೆ ಹೋಗಬೇಕಿದ್ದ ಕಾರಣಕ್ಕೆ ಉದ್ಯೋಗಿಗಳು ಬೆಳಗ್ಗೆ 7ರಿಂದಲೇ ಮತಗಟ್ಟೆ ಕೇಂದ್ರಗಳತ್ತ ದೌಡಾಯಿಸಿದ್ದರು. ಬಳಿಕ ಬಿಸಿಲಿನ ಝುಳ ಹೆಚ್ಚಾಗುತ್ತಿದ್ದರೂ ಮತದಾರರಲ್ಲಿ ಉತ್ಸಾಹ ತಗ್ಗಲಿಲ್ಲ. ಆದರೆ, ಕೆಲವೆಡೆ ಮತದಾನ ಪ್ರಕ್ರಿಯೆ 15-20 ನಿಮಿಷ ವಿಳಂಬವಾದ್ದರಿಂದ ಜನ ಬೇಸರ ವ್ಯಕ್ತಪಡಿಸಿದರು.

ಕಾದ ಕೃಷಿ ಸಚಿವ: ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಸ್ವಗ್ರಾಮ ಎಚ್.ನಾಗಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗೆ ಬೆಳಗ್ಗೆ 7ಕ್ಕೆ ಆಗಮಿಸಿದ್ದರು. ಆದರೆ, ಮತದಾನ 20 ನಿಮಿಷ ತಡವಾದ್ದರಿಂದ ಕಾದು ಮತ ಹಾಕಿದರು. ಬಳಿಕ ತಾಲೂಕಿನ ಇತರ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಮಾಣ ತಿಳಿದುಕೊಳ್ಳುವ ಜತೆಗೆ ಬೆಂಬಲಿಗರಿಗೆ ಸಲಹೆ ನೀಡಿದರು.

ಜಾಲಪ್ಪ ಮತದಾನ: 94ರ ವಯಸ್ಸಿನ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಹಾಗೂ ಕ್ಷೇತ್ರದ ಮಾಜಿ ಸಂಸದ ಆರ್.ಎಲ್.ಜಾಲಪ್ಪ ಅಲ್ಲೀಪುರದಲ್ಲಿ ಮತದಾನ ಮಾಡಿದರು. ಸಾರ್ವಜನಿಕ ಜೀವನದಿಂದ ದೂರ ಉಳಿದಿರುವ ಅವರು ಅನಾರೋಗ್ಯದ ನಡುವೆಯೂ ಬಂದು ಮತದಾನ ಮಾಡಿದ್ದು ಅವರಿಗಿರುವ ಬದ್ಧತೆ ತೋರ್ಪಡಿಸಿತು.

ಮಧುವಣಗಿತ್ತಿಯಾದ ಮತಗಟ್ಟೆ: ಜಿಲ್ಲಾ ಸ್ವೀಪ್ ಸಮಿತಿ ರಮಾಪುರದಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಿದ್ದು, ಅದನ್ನು ಸಿಂಗರಿಸಲಾಗಿತ್ತು. ಪಿಡಿಒ ಜಿ.ಶ್ರೀನಿವಾಸ್ ವಾರದಿಂದ ಮತದಾನದ ಕುರಿತು ಜಾಗೃತಿ ಮೂಡಿಸಿ ಮಾದರಿ ಮತಗಟ್ಟೆ ಮಾಡಲು ಶ್ರಮಿಸಿದ್ದರು. ಪಕ್ಷೇತರ ಅಭ್ಯರ್ಥಿ ನಸುರುಲ್ಲಾ ಮತ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

 

Leave a Reply

Your email address will not be published. Required fields are marked *