ರಟ್ಟಿಹಳ್ಳಿಯಲ್ಲಿಲ್ಲ ಸಾರ್ವಜನಿಕ ಶೌಚಗೃಹ

ರಟ್ಟಿಹಳ್ಳಿ: ಬಯಲು ಶೌಚ ಮುಕ್ತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆ, ಸೌಲಭ್ಯಗಳನ್ನು ಅನುಷ್ಠಾನಗೊಳಿಸಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ರಟ್ಟಿಹಳ್ಳಿಯಲ್ಲಿ ಇನ್ನೂ ಬಯಲು ಶೌಚಕ್ಕೆ ಮುಕ್ತಿ ಸಿಕ್ಕಿಲ್ಲ.

ರಟ್ಟಿಹಳ್ಳಿ ತಾಲೂಕು ಕೇಂದ್ರವಾಗಿ ಎರಡು ವರ್ಷ ಗತಿಸುತ್ತ ಬಂದರೂ ಪಟ್ಟಣದ ಬಸ್ ನಿಲ್ದಾಣ ಬಳಿ ಒಂದು ಸಾರ್ವಜನಿಕ ಶೌಚಗೃಹ ಬಿಟ್ಟರೆ ಪಟ್ಟಣದ ಬೇರೆಲ್ಲೂ ಶೌಚಗೃಹಗಳಿಲ್ಲ. ಇರುವ ಎರಡು ಶೌಚಗೃಹಗಳು ಕಿಡಿಗೇಡಿಗಳ ಕುಕೃತ್ಯದಿಂದ ಹಾಳಾಗಿವೆ.

ತಾಲೂಕು ಕೇಂದ್ರಕ್ಕೆ 63 ಗ್ರಾಮಗಳು ಒಳಪಡುತ್ತಿವೆ. ವಿವಿಧ ಗ್ರಾಮಗಳ ಜನರು ತಮ್ಮ ದೈನಂದಿನ ವ್ಯವಹಾರ, ಶಿಕ್ಷಣ, ಅಗತ್ಯ ಕಾರ್ಯಗಳಿಗೆ ನಿತ್ಯ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ನೈಸರ್ಗಿಕ ಕರೆ ಬಂದರೆ ಬಯಲು ಜಾಗೆ, ಕೆರೆಯನ್ನು ಆಶ್ರಯಿಸಬೇಕಾಗಿದೆ.

ಸಂತೆಯಲ್ಲಿ ಶೌಚದ ಚಿಂತೆ 
ಪಟ್ಟಣದಲ್ಲಿ ಪ್ರತಿ ಶುಕ್ರವಾರ ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುತ್ತದೆ. ಈ ಸಂತೆಗೆ ವಿವಿಧ ಗ್ರಾಮಗಳಿಂದ ಸಾವಿರಾರು ಜನ ಆಗಮಿಸುತ್ತಾರೆ. ಆದರೆ, ಇಲ್ಲಿ ಶೌಚಗೃಹದ ಕೊರತೆಯಿಂದಾಗಿ ಸುತ್ತಲಿನ ಮನೆಗಳ ಅಕ್ಕ-ಪಕ್ಕ ಇರುವ ಬಯಲು ಜಾಗದಲ್ಲಿ ನೈಸರ್ಗಿಕ ಕ್ರಿಯೆ ನಡೆಸಬೇಕಾಗಿದೆ. ಇದರಿಂದಾಗಿ ಸ್ಥಳೀಯರೊಂದಿಗೆ ಪ್ರತಿವಾರ ಗಲಾಟೆ ಇದ್ದದ್ದೆ.

ಕೆರೆ ಬಳಕೆ 
ಪಟ್ಟಣದ ಹೊರಭಾಗದಲ್ಲಿರುವ ಕೆರೆ ಸಾರ್ವಜನಿಕರ ಬಹಿರ್ದೆಸೆಗೆ ಬಳಕೆಯಾಗುತ್ತಿದೆ. ಕೆರೆ ದನಕರುಗಳಿಗೆ ಆಶ್ರಯವಾಗಿರುವ ಕಾರಣ ನೈರ್ಮಲ್ಯ ಕಾಪಾಡುವ ಅರಿವು ಜನರಿಗೆ ಬರಬೇಕಾಗಿದೆ. ಅಲ್ಲದೆ, ಗ್ರಾಪಂನಿಂದ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಅಂದಾಗ ಮಾತ್ರ ಕೆರೆಯ ನೈಜ ಸೌಂದರ್ಯ ಕಾಪಾಡಲು ಸಾಧ್ಯ ಎನ್ನುತ್ತಾರೆ ನಾಗರಿಕರು.

ಜನದಟ್ಟಣೆ ಪ್ರದೇಶದಲ್ಲಿ ಬೇಕು ಶೌಚಗೃಹ

ಪಟ್ಟಣದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ವೃತ್ತ, ಕಾರಂಜಿ ಸರ್ಕಲ್, ಭಗತ್​ಸಿಂಗ್ ಸರ್ಕಲ್, ದುರ್ಗಾದೇವಿ ನಗರ ಬಳಿ ನಿತ್ಯ ಜನದಟ್ಟಣೆ ಅಧಿಕವಾಗಿರುತ್ತದೆ. ಈ ವೃತ್ತಗಳ ಕೆಲವೆಡೆ ಸಾರ್ವಜನಿಕ ಶೌಚಗೃಹ ನಿರ್ವಿುಸಬೇಕಾಗಿದೆ.

ರಟ್ಟಿಹಳ್ಳಿಯಲ್ಲಿ ಒಂದೇ ಶೌಚಗೃಹವಿರುವುದು ವಿಪರ್ಯಾಸ. ಪ್ರಮುಖ ವೃತ್ತಗಳಲ್ಲಿ ಗ್ರಾಪಂನಿಂದ ಸಾರ್ವಜನಿಕ ಶೌಚಗೃಹ ನಿರ್ವಿುಸಿದರೆ ಜನರಿಗೆ ಅನುಕೂಲವಾಗಲಿದೆ. 
| ಶಿವಕುಮರ ಉಪ್ಪಾರ, ಅಖಿಲ ಕರ್ನಾಟಕ ಹಿಂದುಳಿದ ಜನಾಂಗದ ಜಾಗೃತ ಸೇವಾ ಪರಿಷತ್ ರಾಜ್ಯಾಧ್ಯಕ್ಷ

ಪಟ್ಟಣದ ಹಳೇ ಬಸ್ ನಿಲ್ದಾಣ ಮತ್ತು ಹೊಸ ಬಸ್ ನಿಲ್ದಾಣ ವೃತ್ತದ ಬಳಿ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಶೀಘ್ರ ಎರಡು ಹೈಟೆಕ್ ಸಾರ್ವಜನಿಕ ಶೌಚಗೃಹ ನಿರ್ವಿುಸಲಾಗುವುದು. 
| ಸಿ.ಎಂ.ಅರ್ಕಚಾರಿ, ಪಿಡಿಒ ರಟ್ಟಿಹಳ್ಳಿ

Leave a Reply

Your email address will not be published. Required fields are marked *