ರಜಾ ಕಾಲ ನ್ಯಾಯಪೀಠದಲ್ಲಿ ಕಲಾಪ

ಧಾರವಾಡ: ದಶಕದ ಬಳಿಕ ಮೊದಲ ಬಾರಿಗೆ ಇಲ್ಲಿನ ಹೈಕೋರ್ಟ್​ನಲ್ಲಿ ನ್ಯಾ. ಕೆ.ಎಸ್. ಮುದಗಲ್ ಮತ್ತು ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ಗುರುವಾರ ಕಲಾಪ ನಡೆಸಿತು.

ಧಾರವಾಡದಲ್ಲಿ 2008ರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಿ 10 ವರ್ಷ ಕಳೆದಿದ್ದರೂ ರಜಾ ಕಾಲದ ನ್ಯಾಯಪೀಠ ಆರಂಭವಾಗಿರಲಿಲ್ಲ. ಈ ಬಗ್ಗೆ ಹೈಕೋರ್ಟ್ ವಕೀಲರ ಸಂಘದಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಅದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು ಇತ್ತೀಚೆಗೆ ರಜಾ ಕಾಲದ ನ್ಯಾಪೀಠದ ಕಲಾಪ ನಡೆಸಲು ಸೂಚಿಸಿದ್ದರು. ಇದರಿಂದ ಧಾರವಾಡ ಮತ್ತು ಕಲಬುರಗಿಯಲ್ಲಿ ರಜಾ ಕಾಲದ ನ್ಯಾಯಪೀಠ ಆರಂಭಗೊಂಡಿವೆ.

ಬೇಸಿಗೆ ಹಾಗೂ ಚಳಿಗಾಲದ ವೇಳೆ ಹೈಕೋರ್ಟ್​ಗೆ ದೀರ್ಘ ಕಾಲದವರೆಗೆ ರಜೆ ಇರುತ್ತದೆ. ಈ ವೇಳೆ ತುರ್ತು ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್​ನಲ್ಲಿ ರಜಾ ಕಾಲದ ನ್ಯಾಯಪೀಠ ಸ್ಥಾಪನೆಯಾಗಿದೆ. ಈ ಮೊದಲು ಪ್ರಧಾನ ಪೀಠವಾದ ಬೆಂಗಳೂರು ಹೈಕೋರ್ಟ್​ನಲ್ಲಿ ಮಾತ್ರ ರಜಾ ಕಾಲದ ನ್ಯಾಯಪೀಠ ಕಾರ್ಯನಿರ್ವಹಿಸುತ್ತಿತ್ತು. ಈ ಭಾಗದ ಜನ ಕೋರ್ಟ್​ಗೆ ತುರ್ತು ಅರ್ಜಿ ಸಲ್ಲಿಸಬೇಕಾದರೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಧಾರವಾಡದಲ್ಲಿ ರಜಾ ಕಾಲದ ನ್ಯಾಯಪೀಠ ಆರಂಭವಾಗಿದ್ದರಿಂದ ತುರ್ತು ಪ್ರಕರಣಗಳ ಅರ್ಜಿ ಸಲ್ಲಿಕೆಗೆ ಅನುಕೂಲವಾಗಿದೆ ಎಂದು ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದರು. ಗುರುವಾರ ರಜಾ ಕಾಲದ ನ್ಯಾಯಪೀಠದಲ್ಲಿ ನ್ಯಾ. ಕೆ.ಎಸ್. ಮುದಗಲ್ ಮತ್ತು ಎಸ್.ಜಿ. ಪಂಡಿತ್ ಅವರು, 2 ಮೇಲ್ಮನವಿ ಮತ್ತು ತಲಾ 25 ರಿಟ್ ಹಾಗೂ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಿದರು.

ಧಾರವಾಡದಲ್ಲಿ ಹೈಕೋರ್ಟ್ ಸ್ಥಾಪನೆಯಾದ ದಶಕದ ಬಳಿಕ ರಜಾ ಕಾಲದ ನ್ಯಾಯಪೀಠ ಆರಂಭವಾಗಿರುವುದು ಸಂತಸವಾಗಿದೆ. ಈ ಬಗ್ಗೆ ಸಂಘದಿಂದ ಅನೇಕ ವರ್ಷಗಳಿಂದ ಮನವಿ ಮಾಡಲಾಗಿತ್ತು. ಸ್ಪಂದಿಸಿದ ಸಿಜೆ ಅವರು ರಜಾ ಕಾಲದ ನ್ಯಾಯಪೀಠಕ್ಕೆ ಅನುಮತಿ ನೀಡಿರುವುದು ಸಂಘದ ಸದಸ್ಯರಿಗೆ ಮತ್ತು ಕಕ್ಷಿದಾರರಿಗೆ ಹರ್ಷ ಉಂಟುಮಾಡಿದೆ.

– ಸಿ.ಎಸ್. ಪಾಟೀಲ, ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ

ಆರೋಪಿಗೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್

ಧಾರವಾಡ: ಹುಬ್ಬಳ್ಳಿಯ ಸುಶ್ರುತ ಆಸ್ಪತ್ರೆಯ ಡಾ. ಬಾಬು ಹುಂಡೇಕರ್ ಕೊಲೆ ಪ್ರಕರಣದ 1ನೇ ಆರೋಪಿ ನವೀನ ಮುಲ್ಕಿಗೌಡರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ರಜಾಕಾಲದ ನ್ಯಾಯಪೀಠ, ಗುರುವಾರ ವಜಾಗೊಳಿಸಿದೆ.

ಹುಬ್ಬಳಿಯ ಸುಶ್ರುತ ಆಸ್ಪತ್ರೆಯ ಡಾ. ಬಾಬು ಹುಂಡೇಕರ್ ಅವರನ್ನು ಅವರ ಮನೆಯಲ್ಲಿ ಕೊಲೆ ಮಾಡಿ ಮಂಟೂರ ಗ್ರಾಮದ ಹೊರವಲಯದಲ್ಲಿ 2018ರ ಮಾ. 12ರಂದು ಸುಟ್ಟು ಹಾಕಲಾಗಿತ್ತು. ಈ ಸಂಬಂಧ ಡಾ. ಬಾಬು ಅವರ ತಂದೆ ಬಸಪ್ಪ ಹುಂಡೇಕರ್ ಅವರು, ನವೀನ ಮುಲ್ಕಿಗೌಡರ ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಿ ಮಗ ಕಾಣೆಯಾಗಿದ್ದಾನೆ ಎಂದು ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಡಾ. ಬಾಬು ಮತ್ತು ನವೀನ ನಡುವೆ ಹಣಕಾಸಿನ ವ್ಯವಹಾರ ನಡೆದಿದ್ದು, ಡಾ. ಬಾಬು ಹಣ ವಾಪಸ್ ಕೇಳಿದ್ದರಿಂದ ಅವರನ್ನು ಕೊಲೆ ಮಾಡಲಾಗಿದೆ. ಅಲ್ಲದೆ, ಡಾ. ಬಾಬು ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಬಾಬು ಅವರ ಪತ್ನಿ ಶಶಿಕಲಾ ಹುಂಡೇಕರ್ ಹಾಗೂ ಇತರ ಮೂವರು ಕೊಲೆಗೆ ಸಹಕಾರ ನೀಡಿದ್ದರು ಎಂದು ತಿಳಿದುಕೊಂಡು ಐವರನ್ನು ಬಂಧಿಸಿದ್ದರು. ಪ್ರಕರಣದ 1ನೇ ಆರೋಪಿ ನವೀನ ಮುಲ್ಕಿಗೌಡರ ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ಮಾಡಿದ ನ್ಯಾ. ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಗಂಭೀರ ಆರೋಪಗಳು ಕಂಡುಬರುತ್ತಿವೆ ಎಂದು ಅಭಿಪ್ರಾಯಪಟ್ಟು, ಜಾಮೀನು ನೀಡಲು ನಿರಾಕರಿಸಿ, ಅರ್ಜಿಯನ್ನು ವಜಾಗೊಳಿಸಿತು. ಸರ್ಕಾರದ ಪರ ವಕೀಲ ಪ್ರವೀಣ ಉಪ್ಪಾರ ವಾದ ಮಂಡಿಸಿದರು.