ರಜನಿಕಾಂತ್ ಅಳಿಯನಿಗೆ ಇದೆಂಥ ಪರೀಕ್ಷೆ?

‘ಸೂಪರ್ ಸ್ಟಾರ್’ ರಜನಿಕಾಂತ್ ಅಳಿಯ, ‘ರಾಷ್ಟ್ರ ಪ್ರಶಸ್ತಿ’ ವಿಜೇತ ನಟ ಧನುಷ್ ಅವರಿಗೆ ಬಹುಶಃ ಇಂಥದ್ದೊಂದು ಪರೀಕ್ಷೆ ಎದುರಾಗುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಮಧುರೈನ ಮನಂಪಟ್ಟಿ ಗ್ರಾಮದ ವೃದ್ಧ ದಂಪತಿ, ‘ಧನುಷ್ ನಮ್ಮ ಪುತ್ರ. 2002ರಲ್ಲಿ ಆತ ಮನೆ ಬಿಟ್ಟು ಹೋಗಿ, ಈಗ ತಾನು ನಿರ್ದೇಶಕ ಕಸ್ತೂರಿ ರಾಜ ಅವರ ಪುತ್ರ ಎಂದು ಹೇಳಿಕೊಂಡಿದ್ದಾನೆ. ನಮಗೆ ಮಗನಿಂದ ಆಸರೆ ಕೊಡಿಸಿ’ ಎಂದು ಮಧುರೈ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ. ಈ ಸಂಬಂಧ ನಟ ಧನುಷ್ಗೆ ಜ.12ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಆರ್. ಕದಿರೇಶನ್ (60) ಮತ್ತು ಕೆ. ಮೀನಾಕ್ಷಿ (55) ಅವರುಗಳೇ ಕೋರ್ಟ್ ಮೆಟ್ಟೇಲಿರುವ ದಂಪತಿ. 1985ರ ನ.7ರಂದು ಧನುಷ್ ಜನಿಸಿದ್ದು, ಅವರ ಮೂಲ ಹೆಸರು ಕಲಿಸೆಲ್ವನ್ ಎಂದು ಅವರು ತಿಳಿಸಿದ್ದಾರೆ. ‘ಮೇಲೂರಿನ ಆರ್.ಸಿ. ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ ಧನುಷ್, ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಅವರನ್ನು ಶಿವಗಂಗ ಜಿಲ್ಲೆಯ ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದೆವು. ಆದರೆ ಓದಿನಲ್ಲಿ ಹಿನ್ನೆಡೆಯುಂಟಾದ ಕಾರಣ ನಮ್ಮನ್ನು ದೂರಮಾಡಿ, ಚೆನ್ನೈಗೆ ತೆರಳಿ ಸಿನಿಮಾಗಳಲ್ಲಿ ತೊಡಗಿಸಿಕೊಂಡರು. ನಿರ್ದೇಶಕ ಕಸ್ತೂರಿ ರಾಜ ಅವರ ಬಳಿ ಹೋಗಿ ಸೇರಿಕೊಂಡನಂತರ ನಂತರ ಹಲವಾರು ಬಾರಿ ಅವರನ್ನು ಸಂರ್ಪಸಲು ಪ್ರಯತ್ನಿಸಿದರೂ, ನಮ್ಮ ಮನವಿಗೆ ಅವರು ಸ್ಪಂದಿಸಲಿಲ್ಲ’ ಎಂದು ದಂಪತಿ ಆರೋಪಿಸಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ಜತೆ ಸಾಕ್ಷಿ ಎಂಬಂತೆ ಧನುಷ್ ಅವರದು ಎನ್ನಲಾದ ಬಾಲ್ಯದ ಫೋಟೋಗಳನ್ನು ಲಗತ್ತಿಸಲಾಗಿದೆ. ತಮ್ಮಿಬ್ಬರಿಗೂ ವಯಸ್ಸಾಗಿದ್ದು, ಆರೋಗ್ಯದ ಖರ್ಚಿಗೆ ಮಾಸಿಕ 65 ಸಾವಿರ ರೂ. ಕೊಡಿಸಬೇಕು ಎಂಬುದಾಗಿಯೂ ಅರ್ಜಿಯಲ್ಲಿ ತಿಳಿಸಿದ್ದಾರೆ. ತಮ್ಮ ಮಗನನ್ನು ಹಿಂದಿರುಗಿಸಿ ಕೊಡುವಂತೆ ಕೋರಿ ಈ ಮೊದಲೇ ಪೊಲೀಸರಿಗೂ ದೂರು ನೀಡಿದ್ದರು ಎನ್ನಲಾಗುತ್ತಿದೆ. ಈ ಬೆಳವಣಿಗೆಯಿಂದಾಗಿ ಇಡೀ ಕಾಲಿವುಡ್ನಲ್ಲಿ ತಲ್ಲಣ ಸೃಷ್ಟಿಯಾಗಿದೆ.

ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ಗೂ ಧನುಷ್ ಖ್ಯಾತಿ ವ್ಯಾಪಿಸಿತ್ತು. 2004ರಲ್ಲಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

– ಏಜೆನ್ಸೀಸ್

Leave a Reply

Your email address will not be published. Required fields are marked *