‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’

ಗದಗ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆ ವಿರೋಧಿಸಿ ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ನೌಕರರು ಬುಧವಾರ ರಕ್ತದಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ 60ಕ್ಕೂ ಹೆಚ್ಚು ಎನ್​ಪಿಎಸ್ ನೌಕರರು ರಕ್ತದಾನ ಮಾಡಿದರು. 2006ರ ಏ. 1ರಂದು ರಾಜ್ಯ ಸರ್ಕಾರ ಜಾರಿಗೆ ತಂದ ಸರ್ಕಾರಿ ನೌಕರರ ನೂತನ ಪಿಂಚಣಿ ಯೋಜನೆ ಎನ್​ಪಿಎಸ್ ನೌಕರರಿಗೆ ಮಾರಕವಾಗಿದೆ. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ನೌಕರರನ್ನು ಎನ್​ಪಿಎಸ್ ಯೋಜನೆಯಿಂದ ಷರತ್ತು ರಹಿತವಾಗಿ ಸಂಪೂರ್ಣ ಹೊರತರಬೇಕು. ನಿಶ್ಚಿತ ಪಿಂಚಣಿಯನ್ನು ಮರುಸ್ಥಾಪಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಗುಂಜಿಕರ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ಹಿರೇಮಠ ಮಾತನಾಡಿದರು. ಎನ್​ಪಿಎಸ್ ನೌಕರರ ಸಂಘದ ತಾಲೂಕಾಧ್ಯಕ್ಷ ಎಂ.ಕೆ. ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಗೌಡ ಪಾಟೀಲ, ಕೆ.ಎಫ್. ಹಳ್ಯಾಳ, ವಿ.ಬಿ. ಪೊಲೀಸ್​ಪಾಟೀಲ, ಎಸ್.ಎಂ. ಪಾಟೀಲ, ಎಸ್.ಸಿ. ನಾಗರಳ್ಳಿ, ನಾಗರಾಜ ಸಂಕಣ್ಣವರ, ವಿ.ಜಿ. ಖೋಟೆ, ಡಿ.ಎಸ್. ತಳವಾರ, ಎಸ್.ಆರ್. ಕೋಣಿಮನಿ, ದೇವರಡ್ಡಿ ಸೋಮಣ್ಣವರ ಹಾಗೂ ಎನ್​ಪಿಎಸ್ ನೌಕರರು ಇದ್ದರು.

ಮಾನವ ಸರಪಳಿ ನಿರ್ವಿುಸಿದರು..

ಶಿರಹಟ್ಟಿ:  ಹೊಸ ಪಿಂಚಣಿ ಯೋಜನೆ ರದ್ದುಪಡಿಸಲು ಒತ್ತಾಯಿಸಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೊಷಣೆಯೊಂದಿಗೆ ಎನ್​ಪಿಎಸ್ ನೌಕರರು ರಕ್ತದಾನ ಮಾಡುವ ಮೂಲಕ ಶಿರಹಟ್ಟಿ ತಾಲೂಕು ಘಟಕದಿಂದ ಬುಧವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ತಾಲೂಕು ಆಸ್ಪತ್ರೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ನೆಹರು ವೃತ್ತಕ್ಕಾಗಮಿಸಿ ಮಾನವ ಸರಪಳಿ ನಿರ್ವಿುಸಿದರು. ಬಳಿಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಎಂದು ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಸಂಚಾಲಕ ಶರಣಬಸಯ್ಯ ಯಲಿಗಾರ, ತಾಲೂಕು ಉಪಾಧ್ಯಕ್ಷೆ ವಿ.ಎಸ್. ಪಾಟೀಲ, ಗೀತಾ ರಡ್ಡೇರ, ರವಿ ಕಲ್ಲಣ್ಣವರ, ಶಂಕರ ರಾಠೋಡ, ರಾ.ಸ.ನೌ. ಸಂಘ ತಾಲೂಕು ಘಟಕದ ಅಧ್ಯಕ್ಷ ಆರ್.ಎಚ್. ತಿಮ್ಮರಡ್ಡೇರ, ಪ್ರಾ.ಶಾ.ನೌ. ಸಂಘದ ಅಧ್ಯಕ್ಷ ಎಸ್.ಕೆ. ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹರ್ಲಾಪೂರ ಇತರರಿದ್ದರು.