ಶ್ರೀರಂಗಪಟ್ಟಣ: 18 ರಿಂದ 60 ವರ್ಷದೊಳಗಿನ ಎಲ್ಲ ಆರೋಗ್ಯವಂತ ಪುರಷರು ಹಾಗೂ ಮಹಿಳೆಯರು ರಕ್ತದಾನ ಮಾಡುವ ಮೂಲಕ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸಿಲುಕಿದವರ ಜೀವ ಉಳಿವಿಗೆ ಕಾರಣೀಕೃತರಾಗುವ ಜತೆಗೆ ಸದೃಢ ದೈಹಿಕ ಸಾಮರ್ಥ್ಯ ಹೊಂದಬಹುದಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಾಲಯ ತಂತ್ರಜ್ಞೆ ಹಾಗೂ ರಕ್ತದಾನ ಶಿಬಿರಗಳ ಆಯೋಜಕಿ ಭಾನುಮತಿ ತಿಳಿಸಿದರು.
ಪಟ್ಟಣ ಹೊರವಲಯದ ಗಂಜಾಂನ ಚಂದಗಾಲು ರಸ್ತೆಯಲ್ಲಿರುವ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಈಗಲೂ ಹಲವು ಜನರಲ್ಲಿ ರಕ್ತದಾನ ಮಾಡಲು ಭಯ, ಹಿಂದೇಟು ಹಾಗೂ ತಪ್ಪು ಎಂಬ ಮನೋಭಾವ ಹೊಂದಿದ್ದಾರೆ. ಆದರೆ, ದಾನಗಳಲ್ಲೇ ಶ್ರೇಷ್ಠದಾನ ರಕ್ತದಾನ. ಮನುಷ್ಯ ಮನುಷ್ಯರಿಗೆ ಮಾನವೀಯತೆಯಿಂದ ನೆರವಾಗಲೂ ಇದು ಪರಿಣಾಮಕಾರಿ. ಪ್ರತಿ ವರ್ಷದಂತೆ ಈ ಭಾರಿಯೂ ವಿಶ್ವ ಆರೋಗ್ಯ ಸಂಸ್ಥೆಯೂ ರಕ್ತ ನೀಡಿ, ಭರವಸೆ ನೀಡಿ ಒಟ್ಟಾಗಿ ನಾವು ಜೀವ ಉಳಿಸುತ್ತೇವೆ ಎಂಬ ಘೋಷ ವಾಕ್ಯದಡಿ ರಕ್ತದಾನಿಗಳಿಗೆ ರಕ್ತದಾನ ಮಾಡುವಂತೆ ಅರಿವು ಮೂಡಿಸಿದೆ. ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. 45 ಕೆ.ಜಿಗೂ ಅಧಿಕ ತೂಕವಿರುವ, 12.5 ಹಿಮೋಗ್ಲೋಬಿನ್ ಪ್ರಮಾಣ ಹೊಂದಿದ 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ರಕ್ತದಾನಕ್ಕೆ ಅರ್ಹರಿದ್ದಾರೆ. ಒಂದು ಯೂನಿಟ್ ರಕ್ತದಿಂದ ಮೂವರ ಜೀವ ಉಳಿಸಬಹುದಾಗಿದೆ. ಮನುಷ್ಯನ ದೇಹದಲ್ಲಿನ ಕೊಬ್ಬು ಕರಗುವಿಕೆ, ಸಾಕಷ್ಟು ಪರಿಣಾಮಕಾರಿಯಾಗಿ ರಕ್ತದ ಒತ್ತಡ ನಿಯಂತ್ರಣ, ಹೊಸ ರಕ್ತ ಉತ್ಪತ್ತಿಯಾಗುವ ಮೂಲಕ ನಮ್ಮಲ್ಲಿ ರೋಗ ನಿರೋಧಕ ಹಾಗೂ ಜ್ಞಾನಪಕ ಶಕ್ತಿ ಹೆಚ್ಚಿಸುವ ಜತೆಗೆ ಪ್ರಮುಖವಾಗಿ ಒಂದು ಜೀವ ಉಳಿಸಿದ ಸಾರ್ಥಕತೆ ನಮಗೆ ಲಭಿಸುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ತಾವು ಅರಿತು ನಿಮ್ಮ ಸುತ್ತಮುತ್ತಲಿನ ಜನರಿಗೆ ಜಾಗೃತಿ ಮೂಡಿಸಿ ರಕ್ತದಾನಕ್ಕೆ ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.
ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಆದರ್ಶ್ ಮಾತನಾಡಿ, ರಕ್ತದಾನಕ್ಕೆ ಅರ್ಹನಿರುವ ಒಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಒಂದು ಭಾಗವಾಗಬಹುದು. ನಾನೊಬ್ಬ ರಕ್ತದಾನಿ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಹೆಮ್ಮೆ ಆತನಲ್ಲಿರುತ್ತದೆ. ಹಲವರು ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಂಭ್ರಮಿಸುವ ಜತೆಗೆ ಈ ರೀತಿ ರಕ್ತದಾನಿಯಾಗಿಯೂ ಮತ್ತೊಬ್ಬರ ಜೀವ ಉಳಿಸಲು ನೆರವಾಗಿ ಮಾದರಿಯಾಗಬಹುದು. ವಿದ್ಯಾರ್ಥಿಗಳು ಇಂತಹ ಮನಸ್ಥಿತಿಗಳನ್ನು ಈಗಿನಿಂದಲೇ ಬೆಳೆಸಿಕೊಂಡು ಸಮಾಜದ ಮುಂದಿನ ಶಕ್ತಿಗಳಾಗಿ ಎಂದರು.
ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಪಿ.ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯಾ, ಪ್ರಾಂಶುಪಾಲ ರಾಘವೇಂದ್ರ, ಮುಖ್ಯಶಿಕ್ಷಕಿ ಸಂಧ್ಯಾ ಸೇರಿದಂತೆ ಆಡಳಿತ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.