ರಂಭಾಪುರಿ ಮಠಕ್ಕೆ ಕಾಶಿ ಶ್ರೀ ಭೇಟಿ

ಬಾಳೆಹೊನ್ನೂರು: ಮಾನವ ಜೀವನ ಅತ್ಯಮೂಲ್ಯವಾದುದು. ಹಲವು ಜನ್ಮಗಳ ಪುಣ್ಯದ ಫಲ ಈ ಮಾನವ ಜೀವನ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ ಜೀವನದರ್ಶನದ ಸಂದೇಶಗಳು ಜೀವನಕ್ಕೆ ದಾರಿದೀಪ ಎಂದು ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ಶ್ರೀ ರಂಭಾಪುರಿ ಪೀಠದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಆಯೋಜಿಸಿದ್ದ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಇಂದಿನ ವೈಚಾರಿಕ ಯುಗದಲ್ಲಿ ಮನುಷ್ಯ ಧರ್ಮ ಮರೆತರೆ ಆಘಾತ ತಪ್ಪಿದ್ದಲ್ಲ. ವಿಜ್ಞಾನ ಯುಗದಲ್ಲಿ ಬಾಳುತ್ತಿದ್ದರೂ ಧರ್ಮ, ಸಂಸ್ಕೃತಿ ಮತ್ತು ಆದರ್ಶಗಳನ್ನು ಮರೆಯಬಾರದು ಎಂದರು.

ಸಾನ್ನಿಧ್ಯವಹಿಸಿದ್ದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿ, ಸುಖ ಶಾಂತಿದಾಯಕ ಜೀವನಕ್ಕೆ ಮೌಲ್ಯಗಳ ಪರಿಪಾಲನೆ ಅವಶ್ಯ. ಆರೋಗ್ಯಪೂರ್ಣ ಸಮಾಜ ನಿರ್ವಣಕ್ಕೆ ಶಿಕ್ಷಣ ಆರೋಗ್ಯ ಮತ್ತು ಅಧ್ಯಾತ್ಮ ಜ್ಞಾನ ಅಗತ್ಯ. ಮಕರ ಸಂಕ್ರಾಂತಿ ಪುಣ್ಯಕಾಲ ಎಲ್ಲರ ಬಾಳಿನಲ್ಲೂ ಬೆಳಕು ತರಲಿ ಎಂದು ಹೇಳಿದರು.

ಮಕರ ಸಂಕ್ರಾಂತಿ ಅಂಗವಾಗಿ ಮಂಗಲಸ್ನಾನ ಮಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ, ಶ್ರೀ ಸೋಮೇಶ್ವರ ಲಿಂಗಕ್ಕೆ ನಡೆದ ವಿಶೇಷ ಪೂಜೆಯಲ್ಲಿ ಭಕ್ತರು ಪಾಲ್ಗೊಂಡರು. ವೇದಘೊಷಗಳೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ಕಾಶಿ ಜಗದ್ಗುರುಗಳನ್ನು ಬರಮಾಡಿಕೊಂಡರು.</

Leave a Reply

Your email address will not be published. Required fields are marked *