ರಂಗೋಲಿ ಮೂಲಕ ಮತದಾನ ಜಾಗೃತಿ

ಶಿವಮೊಗ್ಗ: ಮತದಾನ ಜಾಗೃತಿಗಾಗಿ ಹಲವು ಚಟುವಟಿಕೆಗಳನ್ನು ಕೈಗೊಂಡಿರುವ ಜಿಲ್ಲಾಡಳಿತ ಮಂಗಳವಾರ ರಂಗೋಲಿ ಸ್ಪರ್ಧೆ ಏರ್ಪಡಿಸುವ ಮೂಲಕ ಗಮನಸೆಳೆಯಿತು. ರಂಗೋಲಿ ಮೂಲಕವೇ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವತಿಯರು ಹಾಗೂ ಮಹಿಳೆಯರು ಯಶಸ್ವಿಯಾದರು.

ಸಂಭ್ರಮದ ಸಭೆ-ಸಮಾರಂಭಗಳಲ್ಲಿ ಕಣ್ಮನ ಸೆಳೆಯುವ, ಮನೆಯ ಹೊಸ್ತಿಲು ದಾಟುವ ಮುನ್ನವೇ ಶುಭಕೋರುವ, ಭೂರಮೆಯನ್ನು ಸಿಂಗರಿಸುವ ಬಹುವರ್ಣದ ರಂಗೋಲಿಗೆ ಎಲ್ಲಿಲ್ಲದ ಬೇಡಿಕೆ. ಜಾತಿ-ಮತ-ಭಾಷೆ ಬಣ್ಣಗಳ ನಿರ್ಬಂಧವಿರದ ರಂಗೋಲಿ ಮತದಾನ ಜಾಗೃತಿಯಲ್ಲೂ ತನ್ನ ಛಾಪು ಮೂಡಿಸಿತು.

ದೂರದಲ್ಲಿ ನಿಂತು ನೋಡಿದಾಗ ವರ್ಣಮಯ ರಂಗೋಲಿ, ವರ್ಣಮಯ ಹಾಸಿಗೆಯಂತೆ ಭಾಸವಾಗುವ ವೈವಿಧ್ಯತೆಯನ್ನು ಹಲವರು ಕಣ್ತುಂಬಿಕೊಂಡು ಅದರ ನೈಜತೆಗೆ ಬೆರಗುಗೊಂಡರು. ಎಳೆಗಳನ್ನು ಸಮನಾಂತರವಾಗಿ ಎಳೆದು ಚುಕ್ಕೆಗಳನ್ನು ಸೇರಿಸಿದ ಹಲವು ರೀತಿಯ ರಂಗೋಲಿ ಚಿತ್ತಾರಗಳು ಮೈತಳೆದು ನಿಂತಿದ್ದವು. ತರಹೇವಾರಿ ಬಣ್ಣಗಳನ್ನು ತುಂಬಿ ಅಲಂಕರಿಸಿದ್ದ ರಂಗೋಲಿ ಹಲವರ ಮನಸೂರೆಗೊಂಡಿತು.

ವಿವಿಧ ಚಟುವಟಿಕೆ:ಒಂದೆಡೆ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಇನ್ನಿಲದ ಬೆವರು ಹರಿಸುತ್ತಿದ್ದರೆ, ಚುನಾವಣಾ ಆಯೋಗ ಮತದಾನದ ಪ್ರಮಾಣ ಹೆಚ್ಚಿಸಲು ಶ್ರಮಿಸುತ್ತಿದೆ. ಇದಕ್ಕಾಗಿ ಎಲ್ಲ ಇಲಾಖೆಗಳನ್ನೂ ಬಳಸಿಕೊಂಡು ಕಾರ್ಯಕ್ರಮ ರೂಪಿಸುತ್ತಿದೆ.

ಜಿಲ್ಲೆಯಲ್ಲಿ ಮತದಾನ ಜಾಗೃತಿಗೆ ಸಂಬಂಧಿಸಿ 300ಕ್ಕೂ ಹೆಚ್ಚು ಕಾರ್ಯಕ್ರಮ ರೂಪಿಸಲಾಗಿದೆ. ವಿವಿಧ ಕಾಲೇಜು ಕ್ಯಾಂಪಸ್​ಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನೇ ಮತದಾನ ಜಾಗೃತಿಗಾಗಿ ರಾಯಭಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಇವರೆಲ್ಲರಿಗೂ ಕಾರ್ಯಾಗಾರ ನಡೆಸಲಾಗಿದೆ. ಈ ವಿದ್ಯಾರ್ಥಿಗಳು ತಾವು ವಾಸಿಸುವ ನೆರೆಹೊರೆಯವರಲ್ಲೂ ಮತದಾನದ ಮಹತ್ವ ಕುರಿತು ಅರಿವು ಮೂಡಿಸುತ್ತಿದ್ದಾರೆ.

ವಿವಿಧ ಕಾಲೇಜಿನ ಎನ್​ಎಸ್​ಎಸ್ ಘಟಕಗಳ ಸಹಯೋಗದಲ್ಲಿ ಮತದಾನ ಜಾಗೃತಿ ನಡೆಸಲಾಗುತ್ತಿದೆ. ಖುದ್ದು ಜಿಲ್ಲಾ ಚುನಾವಣಾಧಿಕಾರಿ, ಜಿಪಂ ಸಿಇಒ, ನಗರ ಪಾಲಿಕೆ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳು ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮತದಾನದ ಮಹತ್ವವನ್ನು ವಿವರಿಸುತ್ತಿದ್ದಾರೆ.

ಹಲವು ಕಾರ್ಯಕ್ರಮ:ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾರರನ್ನು ಮತಗಟ್ಟೆ ಕಡೆಗೆ ಬರುವಂತೆ ಪ್ರೇರೇಪಿಸಲು ಹಲವು ಕಾರ್ಯಕ್ರಮ ನಡೆಸಲಾಗುತ್ತಿದೆ. ಶಾಪಿಂಗ್ ಮಾಲ್, ಬಸ್ ನಿಲ್ದಾಣ, ಪಾರ್ಕ್​ಗಳು, ಸಂಘ ಸಂಸ್ಥೆಗಳ ಆವರಣದಲ್ಲಿ ಮತದಾನದ ಮಹತ್ವವನ್ನು ವಿವರಿಸಲಾಗುತ್ತಿದೆ. ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ದೊಡ್ಡ ಹೋಲ್ಡಿಂಗ್​ಗಳನ್ನು ಅಳವಡಿಸಲಾಗಿದೆ.

ಮುಂದಿನ ದಿನಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕ್ರೀಡಾಕೂಟ ಆಯೋಜಿಸಲು ಜಿಲ್ಲಾಡಳಿತ ತೀರ್ವನಿಸಿದೆ. ವಾಲಿಬಾಲ್ ಕ್ರೀಡಾಕೂಟ ಆಯೋಜಿಸಿ ಅದರೊಂದಿಗೆ ಮತದಾನದ ಮಹತ್ವ ವಿವರಿಸುವ ಬಗ್ಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ.