ರಂಗೇರದ ರಾಜಕೀಯ

ರಾಮನಗರ: ರಾಜ್ಯದ ಹೈವೋಲ್ಟೆಜ್ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾನ ದಿನ ಸಮೀಪಿಸುತ್ತಿದ್ದರೂ ಚುನಾವಣೆ ಕಳೆಗಟ್ಟುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ರಂಗೇರಬೇಕಿದ್ದ ಚುನಾವಣೆ ಕಣ ಬಿಕೋ ಎನ್ನುತ್ತಿದೆ.

ನೆರೆಯ ತುಮಕೂರು ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟ, ಕುತೂಹಲ ಜಿಲ್ಲೆಯಲ್ಲಿ ಕಾಣುತ್ತಿಲ್ಲ. ಆದರೆ, ಮೈತ್ರಿಯ ಲಾಭ-ನಷ್ಟಗಳ ಲೆಕ್ಕಾಚಾರ ಆರಂಭಗೊಂಡಿದ್ದು, ಡಿ.ಕೆ.ಸುರೇಶ್ ಪಡೆಯುವ ಮತಗಳೆಷ್ಟು – ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣಗೌಡ ಪಡೆಯುವ ಮತಗಳೆಷ್ಟು ಎನ್ನುವ ಲೆಕ್ಕಾಚಾರ ಮಾತ್ರ ಉಳಿದು ಕೊಂಡಿದೆ.

ಯಾರಿಗೆ ಲಾಭ?: ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ನಾಲ್ಕರಲ್ಲಿ ಕಾಂಗ್ರೆಸ್ ಹಾಗೂ ಮೂರರಲ್ಲಿ ಜೆಡಿಎಸ್​ನ ಶಾಸಕರು ಇದ್ದಾರೆ. ಕೇವಲ ಒಂದು ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ. ಹೀಗಾಗಿ ಮೈತ್ರಿಕೂಟಕ್ಕೆ ಆನೆ ಬಲವಿದೆ ಎನ್ನುವುದು ಕಾಂಗ್ರೆಸ್ ಪಾಳೆಯದ ಲೆಕ್ಕಾಚಾರ. ಆದರೆ, ಬಿಜೆಪಿ ಇದನ್ನು ಒಪ್ಪಲು ತಯಾರಿಲ್ಲ. ನಮ್ಮ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡುತ್ತಾರೆ ಎನ್ನುವುದು ಕಮಲ ಪಾಳಯ ನಾಯಕರ ಅಭಿಮತ.

ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ 24.56 ಲಕ್ಷ ಮತದಾರರು ಇದ್ದಾರೆ. ಇವರಲ್ಲಿ 1.5 ಲಕ್ಷ ಹೊಸ ಮತದಾರರು ಸೇರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ 14.55 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದರು. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಶೇ.44.85 ಹಾಗೂ ಜೆಡಿಎಸ್ ಅಭ್ಯರ್ಥಿ ಪರ ಶೇ 21.84 ಮತಗಳು ಚಲಾವಣೆ ಆಗಿದ್ದವು. ಎರಡನ್ನೂ ಕೂಡಿದರೆ ಶೇ 66.69 ಮತಗಳು ಬಂದಿದ್ದವು. ಈಗ ಎರಡೂ ಪಕ್ಷ ಸೇರಿ ಒಬ್ಬರೇ ಅಭ್ಯರ್ಥಿ ಆಗಿರುವುದರಿಂದ ದಾಖಲೆಯ ಗೆಲುವು ಕಾಣಬಹುದು ಎಂಬುದು ಮೈತ್ರಿಕೂಟದ ಲೆಕ್ಕಾಚಾರ.

ಬೆಂಗಳೂರು ದಕ್ಷಿಣವೇ ಸ್ಟ್ರಾಂಗ್: ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರವು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಜತೆಗೆ ಇಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 5.98 ಲಕ್ಷ ಮತದಾರದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಾಬಲ್ಯ ಇರುವ ರಾಮನಗರ, ಕನಕಪುರ ಹಾಗೂ ಮಾಗಡಿ ಈ ಮೂರು ಕ್ಷೇತ್ರಗಳ ಒಟ್ಟು ಮತದಾರರ ಸಂಖ್ಯೆ 6.5 ಲಕ್ಷವಿದ್ದು, ಇಲ್ಲಿ ಮೈತ್ರಿ ಅಭ್ಯರ್ಥಿಗೆ ಸಿಗುವ ಮುನ್ನಡೆಯನ್ನು ಬೆಂಗಳೂರು ದಕ್ಷಿಣವೊಂದೇ ಸಮ ಮಾಡಿಕೊಳ್ಳುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ಆದರೆ ಈ ಬಾರಿ ಕಾಂಗ್ರೆಸ್ ಕೂಡ ಇಲ್ಲಿ ಹೆಚ್ಚು ಮತ ಸೆಳೆಯಲು ತಂತ್ರ ರೂಪಿಸುತ್ತಿದೆ. ಹೀಗಾಗಿ ಈ ಕ್ಷೇತ್ರದತ್ತಲೇ ಎರಡೂ ಪಕ್ಷಗಳ ಮುಖಂಡರು ಕಣ್ಣು ನೆಟ್ಟಿದ್ದಾರೆ. ಇದರ ಜತೆಗೆ ರಾಜರಾಜೇಶ್ವರಿ ನಗರ ಮತ್ತು ಆನೇಕಲ್ ಮೇಲೂ ಹೆಚ್ಚಿನ ಗಮನ ಕೇಂದ್ರೀಕೃತವಾಗಿದೆ.

ಬಗೆಹರಿಯದ ಬಿಕ್ಕಟ್ಟು: ಡಿ.ಕೆ.ಸುರೇಶ್​ಗೆ ಈಗಲೂ ಮೈತ್ರಿಯೇ ಕಗ್ಗಂಟಾಗಿದೆ. ಮೇಲ್ನೊಟಕ್ಕೆ ಜೆಡಿಎಸ್ ಮುಖಂಡರು ಕಾಂಗ್ರೆಸ್​ಗೆ ಬೆಂಬಲ ನೀಡುತ್ತೇವೆ ಎನ್ನುವ ಹೇಳಿಕೆಗಳನ್ನು ನೀಡುತ್ತಿದ್ದರೂ ತಳ ಮಟ್ಟದ ಕಾರ್ಯಕರ್ತರು ಹಿಡಿತಕ್ಕೆ ಸಿಗುತ್ತಿಲ್ಲ ಎನ್ನುವ ಆತಂಕ ಕಾಡುತ್ತಿದೆ. ರಾಮನಗರ ಜಿಲ್ಲೆಯಾದ್ಯಂತ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರು ಮೊದಲಿನಿಂದಲೂ ತಿಕ್ಕಾಟ ನಡೆಸುತ್ತಲೇ ಬಂದಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಂದ ಅಡ್ಡ ಮತದಾನ ನಡೆಯಬಹುದು ಎನ್ನುವ ಆತಂಕ ಡಿ.ಕೆ.ಸುರೇಶ್​ಗೆ ಕಾಡುತ್ತಿದ್ದು, ಎಲ್ಲವನ್ನೂ ಸರಿದೂಗಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

ಬಿಜೆಪಿ ಗಣಿತವೇ ಬೇರೆ: ಕ್ಷೇತ್ರದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಆನೇಕಲ್, ರಾಜರಾಜೇಶ್ವರಿ ನಗರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಮೂರು ಕ್ಷೇತ್ರಗಳಿಂದ ಒಟ್ಟು 14 ಲಕ್ಷ ಮತದಾರರು ಇದ್ದಾರೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಿಜೆಪಿ ಪರವಾದ ಅಲೆ ಇದೆ. ಆದರೆ ಇಲ್ಲಿ ಮತದಾನದ ಪ್ರಮಾಣ ಕಡಿಮೆ ಆಗುತ್ತಿರುವ ಕಾರಣ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ. ಈ ಬಾರಿ ಎಲ್ಲೆಡೆ ಮತದಾನ ಜಾಗೃತಿ ಹೆಚ್ಚುತ್ತಿದ್ದು, ಈ ಕ್ಷೇತ್ರಗಳಲ್ಲಿ ಮತ ಚಲಾವಣೆ ಹೆಚ್ಚಾದಷ್ಟೂ ಪಕ್ಷದ ಅಭ್ಯರ್ಥಿಗೆ ಅನುಕೂಲ ಎನ್ನುವುದು ಕಮಲ ಪಾಳೆಯದ ಗಣಿತವಾಗಿದೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷಕ್ಕೆ ಇರುವ ಸಾಂಪ್ರದಾಯಿಕ ಮತಗಳನ್ನು ಸೆಳೆಯುವ ಜತೆಗೆ ಯುವ ಮತದಾರರು ಮತ್ತು ಮೋದಿ ಅಲೆಯನ್ನು ಅಸ್ತ್ರವನ್ನಾಗಿಸಿಕೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದು.

Leave a Reply

Your email address will not be published. Required fields are marked *