ರಂಗೇರತೊಡಗಿದೆ ಉಡುಪಿ-ಚಿಕ್ಕಮಗಳೂರು ಕಣ

ಚಿಕ್ಕಮಗಳೂರು: ಅಖಾಡದ ಪ್ರಮುಖ ಅಭ್ಯರ್ಥಿಗಳು ಅಂತಿಮವಾಗುತ್ತಿದಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕಣ ಗರಿಗೆದರತೊಡಗಿದೆ.

ಇಬ್ಬರು ಹುರಿಯಾಳುಗಳು ಕಣದಲ್ಲಿದ್ದು, ಇನ್ನೆರಡು ದಿನದಲ್ಲಿ ಅಖಾಡ ಪೂರ್ತಿ ರಂಗೇರಲಿದೆ. ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಚುನಾವಣಾ ಆಟ ತಡವಾಗಿ ಶುರುವಾಗುತ್ತಿದೆ.

ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ ಬೇಟೆಗೆ ತಾಲೀಮು ಶುರು ಮಾಡಿದ್ದಾರೆ. ಹದಿನೈದು ದಿನದಿಂದ ಮೈತ್ರಿಕೂಟ ಹಾಗೂ ಬಿಜೆಪಿಯಿಂದ ಅಭ್ಯರ್ಥಿ ಯಾರಾಗುತ್ತಾರೆಂಬ ಜಿಜ್ಞಾಸೆ ಇತ್ತು. ಈಗ ಅಭ್ಯರ್ಥಿಗಳು ಯಾರು ಎಂಬುದು ಸ್ಪಷ್ಟವಾಗಿದೆ.

ಸದ್ಯ ಸಿಪಿಐ(ಎಂಎಲ್), ಬಿಎಸ್​ಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿವೆ. ಕಣದಲ್ಲಿ ಈಗ ನಾಲ್ವರು ಅಭ್ಯರ್ಥಿಗಳು ಇದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದರೂ ಗೆಲುವಿಗೆ ಪೈಪೊಟಿ ನಡೆಯುವುದು ಮಾತ್ರ ಬಿಜೆಪಿ ಮತ್ತು ಮೈತ್ರಿ ಕೂಟದ ಅಭ್ಯರ್ಥಿಗಳ ನಡುವೆ. ಉಳಿದವರದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ.

ಇಬ್ಬರು ಪ್ರಮುಖ ಅಭ್ಯರ್ಥಿಗಳು ಪ್ರಾರಂಭದಲ್ಲಿಯೇ ಸ್ವಲ್ಪ ಗೊಂದಲದಿಂದ ಕಣಕ್ಕಿಳಿಯುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದಲ್ಲಿಯೇ ಇದ್ದ ವಿರೋಧ ಈಗ ಕಾಣುತ್ತಿಲ್ಲ. ಇದೇ ರೀತಿ ಕಾಂಗ್ರೆಸ್​ಗೆ ಕ್ಷೇತ್ರ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದ್ದ ಎರಡೂ ಜಿಲ್ಲೆ ಮುಖಂಡರಿಗೆ ಕಾಂಗ್ರೆಸ್​ನ ಮಾಜಿ ಸಚಿವರೊಬ್ಬರು ಕಣಕ್ಕಿಳಿಯುತ್ತಿರುವುದು ತುಸು ಸಮಾಧಾನ ತಂದಿದೆ.

ಪ್ರಾರಂಭದಲ್ಲಿ ಈ ಇಬ್ಬರೂ ಅಭ್ಯರ್ಥಿಗಳು ಪಕ್ಷದ ಒಳಗಿನ ಅಪಸ್ವರ ತಣ್ಣಗೆ ಮಾಡುವ ಕಡೆ ಮೊದಲು ಗಮನ ನೀಡಿದ್ದಾರೆ. ಒಳಗಿನವರನ್ನು ಒಟ್ಟಾಗಿಸಿ ಒಗ್ಗಟ್ಟಿನೊಂದಿಗೆ ಎದುರಾಳಿ ಮೇಲೆ ದಾಳಿ ಮಾಡಲು ಸನ್ನದ್ಧರಾಗಿದ್ದಾರೆ.

ಲೋಕಸಭೆಗೆ ಲಂಘಿಸುವರೇ ಪ್ರಮೋದ್? : ರಾಜಕೀಯ ಇತಿಹಾಸವಿರುವ ಕುಟುಂಬದಿಂದ ಬಂದಿರುವ ಪ್ರಮೋದ್ ಮಧ್ವರಾಜ್ ಅವರ ತಾಯಿ-ತಂದೆ ರಾಜಕೀಯ ಕ್ಷೇತ್ರದಲ್ಲಿ ಪ್ರಭಾವಿಗಳಾಗಿದ್ದವರು. ರಾಜಕಾರಣದ ತರಬೇತಿಯನ್ನು ಮನೆಯಿಂದಲೇ ಪಡೆದಿರುವ ಪ್ರಮೋದ್ ಮೂರು ಬಾರಿ ಉಡುಪಿ ಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ಧಿಸಿ ಒಮ್ಮೆ ಗೆಲುವು ಕಂಡಿದ್ದಾರೆ.

2008ರಲ್ಲಿ ಪ್ರಥಮ ಬಾರಿಗೆ ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯ ರಘುಪತಿ ಭಟ್ ವಿರುದ್ಧ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಕೇವಲ 2,479 ಮತಗಳ ಅಂತರದಿಂದ ಸೋಲುಂಡಿದ್ದರು. ನಂತರ 2013ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಬಿಜೆಪಿಯ ಬಿ.ಸುಧಾಕರ ಶೆಟ್ಟಿಯನ್ನು 39,524 ಮತಗಳ ಅಂತರದಿಂದ ಮಣಿಸಿದ್ದರು. ಆಗ ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರಮೋದ್ ಮತ್ತೆ ಬಿಜೆಪಿಯ ರಘುಪತಿ ಭಟ್ ವಿರುದ್ಧ ಸ್ಪರ್ಧಿಸಿ 12,044 ಮತಗಳ ಅಂತರದಿಂದ ಸೋಲುಂಡಿದ್ದರು. ಸಂಪುಟ ದರ್ಜೆ ಸಚಿವರಾಗಿ ಕೆಲಸ ಮಾಡಿದ್ದ ಅವರು ಆಗ ಸೋತಿದ್ದು ಕ್ಷೇತ್ರದಲ್ಲಿ ಪಕ್ಷಕ್ಕೆ ಆದ ದೊಡ್ಡ ಹಿನ್ನಡೆ ಎಂದು ರಾಜಕಾರಣದಲ್ಲಿ ಚರ್ಚೆಯಾಗಿತ್ತು.

ಬದಲಾದ ಪರಿಸ್ಥಿತಿಯಲ್ಲಿ ಈಗ ಅವರು ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕ್ಷೇತ್ರ ಕಾಂಗ್ರೆಸ್​ನಿಂದ ಕೈತಪ್ಪಿ ಹೋಗಿರುವುದರಿಂದ ಎರಡೂ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಿಟ್ಟಿಗೆದ್ದಿದ್ದರು. ಕಾಂಗ್ರೆಸ್ ಕಾರ್ಯಕರ್ತರ ಭಾವನೆ ಅರ್ಥ ಮಾಡಿಕೊಂಡಿರುವ ಪ್ರಮೋದ್, ನಾನು ಕಾಂಗ್ರೆಸಿಗನಾಗಿದ್ದೇ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡುತ್ತೇನೆಂದು ಭಾವನಾತ್ಮಕವಾಗಿ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.

ಮುಂದುವರಿಯುವುದೇ ಜಯದ ಹಾದಿ?: ಸಂಘಪರಿವಾರ ಹಾಗೂ ಬಿಜೆಪಿಯ ಪ್ರಬಲ ನಾಯಕಿಯಾಗಿರುವ ಶೋಭಾ ಕರಂದ್ಲಾಜೆ ಒಮ್ಮೆ ಶಾಸಕರಾಗಿದ್ದು, ಯಡಿಯೂರಪ್ಪ ಮಂತ್ರಿಮಂಡದಲ್ಲಿ ಸಂಪುಟ ದರ್ಜೆ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಯಪ್ರಕಾಶ್ ಹೆಗ್ಡೆ ವಿರುದ್ಧ 1,81,643 ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದರು. ಜೆಡಿಎಸ್​ನಿಂದ ಸ್ಪರ್ಧಿಸಿದ್ದ ವಿ.ಧನಂಜಯಕುಮಾರ್ ಕೇವಲ 14,895 ಮತ ಪಡೆದಿದ್ದರು.