ಧಾರವಾಡ: ಧಾರವಾಡ ರಂಗಾಯಣವನ್ನು ರಾಜ್ಯಾದ್ಯಂತ ಪ್ರಸಿದ್ಧಿ ಪಡಿಸುವ ಕನಸು ಕಂಡಿದ್ದೇನೆ. ಅದರಂತೆ ನಗರದ ಎಲ್ಲ ಹಿರಿಯರ ಸಹಕಾರ, ಸಲಹೆ ಪಡೆದು ರಂಗಕರ್ವಿುಗಳ ಜತೆಗೂಡಿ ಉನ್ನತ ಮಟ್ಟಕ್ಕೆ ಒಯ್ಯಲು ಪ್ರಯತ್ನಿಸುತ್ತೇನೆ ಎಂದು ರಂಗಾಯಣ ನೂತನ ನಿರ್ದೇಶಕ ರಮೇಶ ಪರವೀನಾಯ್ಕರ್ ತಿಳಿಸಿದರು.
ಸೋಮವಾರ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದ ಹಿರಿಯ ಸಾಹಿತಿಗಳು, ಕವಿಗಳು, ರಂಗಾಸಕ್ತರನ್ನು ಭೇಟಿ ಮಾಡಿ ಮಾರ್ಗದರ್ಶನ ಕೋರಿದ್ದೇನೆ. ಸಹಕಾರ ನೀಡುವ ಭರವಸೆಯನ್ನೂ ನೀಡಿದ್ದಾರೆ. ಅದರಂತೆ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು ಎಂದರು.
ರಂಗಭೂಮಿ ಬಗ್ಗೆ ಎಷ್ಟೇ ಕಲಿತರೂ ಕಡಿಮೆ. ರಂಗಾಯಣ ಕುರಿತು ಸಮಗ್ರವಾಗಿ ತಿಳಿದುಕೊಂಡು ಸೂಕ್ತ ಯೋಜನೆಗಳನ್ನು ರೂಪಿಸಲು ಐದಾರು ತಿಂಗಳು ಸಮಯ ಬೇಕಾಗುತ್ತದೆ. ಜತೆಗೆ ಹಿಂದಿನ ನಿರ್ದೇಶಕರು ರೂಪಿಸಿದ ಯೋಜನೆಗಳನ್ನು ಸಹ ತಿಳಿದು ಕ್ರಿಯಾಯೋಜನೆ ಸಿದ್ಧಪಡಿಸಿ ಅವುಗಳನ್ನು ಜಾರಿಗೆ ತರಲಾಗುವುದು. ರಂಗಾಯಣವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ರಂಗಾಯಣಕ್ಕೆ ಬೇಕಿರುವ ಅನುದಾನ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ರ್ಚಚಿಸಿ, ಕೆಲ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸದ್ಯ ಸರ್ಕಾರ 55 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರಿಗೆ ಮಾಸಾಶನ ನೀಡುತ್ತಿದೆ. ಅದನ್ನು 50 ವರ್ಷಕ್ಕೆ ಇಳಿಸುವುದು, ಮಾಸಾಶನ ಇಷ್ಟೇ ನೀಡಬೇಕು ಎಂಬ ಚೌಕಟ್ಟು ತೆರವು, ಗ್ರಾಮೀಣ ಕಲಾವಿದರಿಗೂ ಮಾಸಾಶನ, ಕಲಾವಿದರ ಮಕ್ಕಳಿಗೆ ಪಠ್ಯ ಪುಸಕ್ತ ವಿತರಣೆ ಹಾಗೂ ಗ್ರಾಮೀಣ ಕಲಾವಿದರಿಗೂ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಈ ಕುರಿತು ಮುಂದಿನ ದಿನಗಳಲ್ಲಿ ಸಹ ಸರ್ಕಾರದ ಕಣ್ಣು ತೆರೆಯಿಸುವ ಕೆಲಸ ನಡೆಯಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ರಂಗ ಸಮಾಜ ಸದಸ್ಯ ಸಿದ್ದರಾಮ ಹಿಪ್ಪರಗಿ, ಮಾಜಿ ಮೇಯರ್ ಪಾಂಡುರಂಗ ಪಾಟೀಲ, ಇತರರು ಇದ್ದರು.
ಪ್ರತಿಭೆ ಗುರುತಿಸಿ ಆಯ್ಕೆ
ನಾನು ಬಿಜೆಪಿ ಕಾರ್ಯಕರ್ತ. ಆದರೆ, ಸರ್ಕಾರ ನನ್ನಲ್ಲಿನ ಪ್ರತಿಭೆ ಗುರುತಿಸಿ ನಿರ್ದೇಶಕನನ್ನಾಗಿ ನೇಮಿಸಿದೆ ಹೊರತು ಕಾರ್ಯಕರ್ತ ಎಂಬ ಕಾರಣಕ್ಕಾಗಿ ಅಲ್ಲ. ಕೆಲ ರಂಗಕರ್ವಿುಗಳು ಯಾವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ. ಇಲ್ಲಿ ಪಕ್ಷದ ಸಿದ್ಧಾಂತದ ಮೇಲೆ ಕೆಲಸ ಮಾಡುವುದಿಲ್ಲ. ಕಲಾವಿದರಲ್ಲಿ ಯಾವುದೇ ಭೇದ-ಭಾವ ಮಾಡದೆ ಕೆಲಸ ಮಾಡುತ್ತೇನೆ. ವಿರೋಧ ಮಾಡುತ್ತಿರುವವರ ಜತೆಗೆ ರ್ಚಚಿಸಿ ಅವರ ಸಲಹೆ ಪಡೆಯಲಾಗುವುದು. ಆದರೆ, ನಾನೊಬ್ಬ ಕಲಾವಿದನೇ ಅಲ್ಲ ಎನ್ನುತ್ತಿರುವುದು ದುಃಖಕರ ಸಂಗತಿ. ನಿರ್ದೇಶಕ ಸ್ಥಾನಕ್ಕೆ ಯಾವುದೇ ಧಕ್ಕೆ ಬರದಂತೆ ಕಾನೂನು ಚೌಕಟ್ಟಿನಲ್ಲೇ ಕೆಲಸ ನಿರ್ವಹಿಸಲಾಗುವುದು ಎಂದು ಪರವೀನಾಯ್ಕರ್ ಹೇಳಿದರು.