ರಂಗಾಯಣದಲ್ಲಿ ಗರಿಗೆದರಿದ ರಂಗ ಸಂಕ್ರಾಂತಿ

ಮೈಸೂರು: ರಂಗಹಬ್ಬ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2019’ಕ್ಕೆ ಶನಿವಾರ ಸಂಜೆ ಸಂಭ್ರಮದ ಚಾಲನೆ ದೊರೆಯಿತು. ಇದರೊಂದಿಗೆ ಸಂಕ್ರಾಂತಿ ಸಡಗರಕ್ಕೆ 3 ದಿನ ಮುನ್ನವೇ ರಂಗಾಯಣದಲ್ಲಿ ‘ರಂಗ ಸಂಕ್ರಾಂತಿ’ ಕಲರವ ಗರಿಗೆದರಿತು. ರಂಗಾಯಣದ ವನರಂಗದಲ್ಲಿ ಶನಿವಾರ ಸಂಜೆ ಕಿಕ್ಕಿರಿದು ತುಂಬಿದ್ದ ಅಪಾರ ರಂಗಪ್ರಿಯರ ಸಮ್ಮುಖದಲ್ಲಿ ಹಿರಿಯ ರಂಗಕರ್ವಿು ಪ್ರಸನ್ನ ನಾಟಕೋತ್ಸವ ಉದ್ಘಾಟಿಸಿದರು. ರಂಗಕರ್ವಿು ಮೈಮ್ ಮತ್ತು ತಂಡದ ನೃತ್ಯರೂಪಕದೊಂದಿಗೆ ರಂಗಮಂಚದ ಮೇಲೆ ‘ಬಹುರೂಪಿ ರಂಗು’ ತೆರೆದುಕೊಂಡಿತು.

ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ರಮೇಶ್​ಭಟ್ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಪ್ರದರ್ಶನಗೊಂಡ ಅರೆಬಿಕ್ ಭಾಷೆಯ, ರಾಡು ಮಿಹೈಲೇನು ನಿರ್ದೇಶನದ ‘ಲಾ ಸೋರ್ಸ್ ಡಿಸ್ ಪೆಮ್ಮೆಸ್’ ಹಾಗೂ ಇಂಗ್ಲಿಷ್ ಭಾಷೆಯ ನಿಕಿ ಕೆರೋ ನಿರ್ದೇಶನದ ‘ನಾರ್ಥ್ ಕಂಟ್ರಿ’ ಸಿನಿಮಾಗಳು ಪ್ರೇಕ್ಷಕರ ಮನಗೆದ್ದವು.

ಕಿಂದರಿಜೋಗಿ ಆವರಣದಲ್ಲಿ ನಡೆದ ಗಾರುಡಿ ಗೊಂಬೆ, ಚಂಡೆವಾದನ, ಕೊಂಬು ಕಹಳೆ, ಡೊಳ್ಳು ಕುಣಿತಕ್ಕೂ ಕಲಾಸಕ್ತರಿಂದ ಪ್ರೋತ್ಸಾಹ ದೊರೆಯಿತು. ಮೊದಲ ದಿನ ಕಲಾಮಂದಿರದಲ್ಲಿ ‘ಶ್ರೀರಾಮಾಯಣ ದರ್ಶನಂ’ ನಾಟಕ ಪ್ರದರ್ಶನಗೊಂಡಿತು.

ಈ ಬಾರಿ ಬಹುರೂಪಿ ಲಿಂಗ ಸಮಾನತೆ ಆಶಯದೊಂದಿಗೆ ನಡೆಯುತ್ತಿರುವುದು ವಿಶೇಷ. ರಂಗಹಬ್ಬದಲ್ಲಿ ವಿವಿಧ ಭಾಷೆಯ 12 ನಾಟಕಗಳು, ರಾಜ್ಯದ ಬೇರೆ ಬೇರೆ ಜಿಲ್ಲೆಗಳ 6 ನಾಟಕಗಳು ಪ್ರದರ್ಶನಗೊಳ್ಳಲಿವೆ. ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ, ರುಚಿಕರ ಆಹಾರ ತಿನಿಸು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ 80 ಮಳಿಗೆಗಳು ತಲೆ ಎತ್ತಿವೆ. 12ಕ್ಕೂ ಹೆಚ್ಚು ಮಳಿಗೆಯಲ್ಲಿ ದೇಸಿ ಆಹಾರ ಪದ್ಧತಿಗೆ ವ್ಯವಸ್ಥೆ ಮಾಡಲಾಗಿದೆ. ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಂಚಾಲಕ ಮಹದೇವ್ ಇತರರಿದ್ದರು.

ರಾಜಧಾನಿಯ ರಂಗಾಯಣದಂತಹ ಸಂಸ್ಥೆ ನಿರ್ವಣವಾಗಬೇಕು. ಬೆಂಗಳೂರಿನಲ್ಲೂ ಸಾಕಷ್ಟು ರಂಗಾಸಕ್ತರಿದ್ದು, ಸದಾ ಚಟುವಟಿಕೆಯಿಂದ ಕೂಡಿರುತ್ತದೆ.

| ರಮೇಶ್​ಭಟ್ ಹಿರಿಯ ನಟ,

ಧರ್ಮ ರಕ್ಷಣೆಗೆ ರಂಗಭೂಮಿ

ದೇವರನ್ನು ವೈದಿಕತೆಯಿಂದ ಎಳೆದು ತಂದು ಮತ್ತೆ ಶೂದ್ರ ಪರಂಪರೆಯಲ್ಲಿ ಕೂರಿಸಬೇಕಾಗಿದೆ. ಆ ಕೆಲಸ ಮಾಡುವ ಶಕ್ತಿ, ಸಾಮರ್ಥ್ಯ ರಂಗಭೂಮಿಗೆ ಇದೆ ಎಂದು ರಂಗಕರ್ವಿು ಪ್ರಸನ್ನ ಅಭಿಪ್ರಾಯಪಟ್ಟರು. ರಂಗಾಯಣದ ವನರಂಗ ವೇದಿಕೆಯಲ್ಲಿ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿಗೂ ರಂಗಭೂಮಿಯ ಬಹುಮುಖ್ಯ ಜವಾಬ್ದಾರಿ ಧರ್ಮ ಸಂರಕ್ಷಣೆಯೇ ಆಗಿದೆ. ಧರ್ಮ ಸಂರಕ್ಷಣೆ ಹೇಗೆ ಎಂಬುದನ್ನು ನಮ್ಮದೇ ಕವಿಗಳು, ತತ್ತ್ವಜ್ಞಾನಿಗಳು ತುಂಬ ಚೆನ್ನಾಗಿ ಅರ್ಥ ಮಾಡಿಸಿದ್ದಾರೆ. ಕೆಲವು ದಶಕಗಳ ಹಿಂದೆ ಕುವೆಂಪು ಅವರು ರಾಮಾಯಣವನ್ನು ಎತ್ತಿ ಹಿಡಿದು ಧರ್ಮ ಸಂರಕ್ಷಣೆಯಲ್ಲಿ ಕೇವಲ ವೈದಿಕ ಅರ್ಥ ಮಾತ್ರ ಇಲ್ಲ ಎಂದು ಸಾರಿದ್ದಾರೆ ಎಂದರು.

Leave a Reply

Your email address will not be published. Required fields are marked *