ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ

ಭಟ್ಕಳ: ರಂಗಭೂಮಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗುವ ಸಾಧನ. ಅಭಿನಯ ಕಲೆಯ ಮೂಲಕ ವ್ಯಕ್ತಿಯ ಜೀವನಕ್ಕೆ ಬೇಕಾದ ಸಂವಹನ ಕೌಶಲ, ಸಹಬಾಳ್ವೆ ಬೆಳೆಸಿಕೊಳ್ಳಲು ಪರಿಣಾಮಕಾರಿ ಎಂಬುದು ಪ್ರಯೋಗಾತ್ಮಕವಾಗಿ ದೃಢಪಟ್ಟಿದೆ ಎಂದು ಉದ್ಯಮಿ ರಾಘವೇಂದ್ರ ನಾಯ್ಕ ಹೇಳಿದರು.

ಇಲ್ಲಿನ ನ್ಯೂ ಇಂಗ್ಲಿಷ್ ಪದವಿಪೂರ್ವ ಕಾಲೇಜ್​ನಲ್ಲಿ ಸಂಗಾತಿ ರಂಗಭೂಮಿ ಅಂಕೋಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ನ್ಯೂ ಇಂಗ್ಲಿಷ್ ಪಪೂ ಕಾಲೇಜ್, ಪ್ರಾರ್ಥನಾ ಪ್ರತಿಷ್ಠಾನ, ಪತ್ರಕರ್ತರ ಸಂಘದ ಸಹಯೋಗದಲ್ಲಿ ಗುರುವಾರ ಜರುಗಿದ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಮಾತನಾಡಿ, ನಾಟಕ ರಂಗ ಮತ್ತು ಪತ್ರಿಕಾರಂಗ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡರ ಗುರಿ ಸಮಾಜದ ಏಳ್ಗೆ, ಜನರಲ್ಲಿ ಜಾಗೃತಿ, ಭಾಷಾ ಪ್ರೇಮ, ಭಾಷಾ ಜ್ಞಾನದ ಬಗ್ಗೆ ಒಲವು ಮೂಡಿಸುವುದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ, ಪ್ರಾರ್ಥನಾ ಪ್ರತಿಷ್ಠಾನದ ಮುಖ್ಯಸ್ಥ ಗಂಗಾಧರ ನಾಯ್ಕ ಮಾತನಾಡಿ, ನಾಟಕಕ್ಕೆ ಎಲ್ಲ ವರ್ಗದವರನ್ನು ಸೆಳೆಯುವ ಶಕ್ತಿ ಇದೆ. ಆಸಕ್ತರಿಗೆ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ರಂಗ ತರಬೇತಿ ನೀಡುವ ಕೆಲಸವಾಗಬೇಕು ಎಂದರು. ನ್ಯೂ ಇಂಗ್ಲಿಷ್ ಪಪೂ ಕಾಲೇಜ್ ಪ್ರಾಚಾರ್ಯ ವೀರೇಂದ್ರ ಶಾನಭಾಗ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ ಮಾತ ನಾಡಿದರು. ರಂಗಭೂಮಿಯಲ್ಲಿ ತೊಡಗಿಸಿಕೊಂಡ ಹಿರಿಯ ರಂಗಕರ್ವಿು ಅಶೋಕ ಮಹಾಲೆ ಅವರಿಗೆ ಸಿಜಿಕೆ ಬೀದಿರಂಗ ದಿನದ ಅಂಗವಾಗಿ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು. ಇದೇ ವೇಳೆ ರಂಗಭೂಮಿಯಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡ ಕೆ.ಆರ್.ನಾಯ್ಕ, ಇತರರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಪ್ರಶಸ್ತಿ ಪುರಸ್ಕೃತ ಅಶೋಕ ಮಹಾಲೆ ಹಾಗೂ ಕೆ.ಆರ್. ನಾಯ್ಕ ಮಾತನಾಡಿದರು. ವಿರೂಪಾಕ್ಷ ಕಲಾ ಮಂಡಳಿಯ ಸಚಿನ್ ಮಹಾಲೆ, ರಾಜೇಶ ಮಹಾಲೆ, ಶ್ರೀನಿವಾಸ ಕಲಾ ಮಿತ್ರ ಮಂಡಳಿಯ ವೆಂಕಟೇಶ ನಾಯ್ಕ, ಜಗದೀಶ ನಾಯ್ಕ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು. ಕಸಾಪ ಗೌರವ ಕಾರ್ಯದರ್ಶಿ ಎಂ.ಪಿ. ಭಂಡಾರಿ, ಕೆ. ರಮೇಶ ಹಾಗೂ ಚಂದ್ರಪ್ರಭಾ ಕೊಡಿಯಾ ನಿರ್ವಹಿಸಿದರು.