ರಂಗಭೂಮಿಯಿಂದಷ್ಟೇ ಮೊಬೈಲೆಂಬ ಬ್ರಹ್ಮ ರಾಕ್ಷಸನನ್ನು ಎದುರಿಸಲು ಸಾಧ್ಯ

ಸಿದ್ದಾಪುರ: ಮೊಬೈಲ್ ಎಂಬ ಬ್ರಹ್ಮ ರಾಕ್ಷಸನನ್ನು ಎದುರಿಸಲು ರಂಗಭೂಮಿಯಿಂದ ಮಾತ್ರ ಸಾಧ್ಯ. ಬದುಕನ್ನು ಜೀವನ್ಮುಖಿಗೊಳಿಸುವ, ಸಮಾಜಮುಖಿ ಗೊಳಿಸುವ ಜೀವಂತ ಕಲೆಯ ಜತೆ ಅವಿನಾಭಾವ ಸಂಬಂಧ ಉಳಿಸಿಕೊಳ್ಳಬೇಕು ಎಂದು ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.

ಪಟ್ಟಣದ ಶಂಕರಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ದಶಮಾನೋತ್ಸವ, ಸಾಂಸ್ಕೃತಿಕ ಸಂಭ್ರಮಕ್ಕೆ ಚಾಲನೆ ಹಾಗೂ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರೀ ಅನಂತ ಪ್ರಶಸ್ತಿ ಪ್ರದಾನ ಮಾಡಿ ಅವರು ಭಾನುವಾರ ಮಾತನಾಡಿದರು.

ಜೀವಂತಿಕೆ ಇರುವುದು ರಂಗೂಮಿಯಲ್ಲಿ ಮಾತ್ರ. ಇಂದಿನ ತಂತ್ರಜ್ಞಾನ ನಮ್ಮನ್ನು ಸಮಾಜದಿಂದ ವಿಮುಖಗೊಳಿಸುತ್ತಿದೆ. ಕಲೆಗೆ ಬೇಕಾದುದು ಪ್ರಜ್ಞಾ ಶಿಸ್ತು. ಆದರೆ, ಇಂದು ಬಹಳ ಜನರಿಗೆ ಸಂಪ್ರದಾಯದ ಜತೆಗೆ ಹೊಂದಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ನಂಬಿಕೆಗಿಂತ ಇಂದು ಅಪನಂಬಿಕೆಗಳೇ ಹೆಚ್ಚು. ಅಪನಂಬಿಕೆಯ ನಡುವೆ ಬದುಕುವಂತಾಗಿದೆ ಎಂದರು.

ನಮ್ಮ ಹಿರಿಯರು ಹಾಕಿಕೊಟ್ಟ ಪ್ರಜ್ಞಾ ಶಿಸ್ತು, ಸಂಸ್ಕೃತಿ, ಕಲೆ ಉಳಿಸಿಕೊಳ್ಳಬೇಕಾಗಿದೆ. ನಮ್ಮ ವಿಜ್ಞಾನ ಕೂಡ ಅದನ್ನೇ ಹೇಳುತ್ತಿದೆ. ನಂಬಿಕೆಗಳನ್ನು ಉಳಿಸಿಕೊಳ್ಳುವ ಕಾರ್ಯ ಆಗಬೇಕು. ಇತ್ತೀಚೆಗೆ ಯಕ್ಷಗಾನ ವೇಷ ರಸ್ತೆಯಲ್ಲಿ ಮಾರುಕಟ್ಟೆ ಆಗುತ್ತಿದೆ. ಇದು ರಂಗಭೂಮಿಯಲ್ಲಿ ಮಾತ್ರ ಕಾಣಿಸಿಕೊಳ್ಳುವಂತಾಗಬೇಕು. ಹಾಗಿದ್ದರೆ ಮಾತ್ರ ಕಲೆಯ ಜೀವಂತಿಕೆ, ಪರಂಪರೆ ಹಾಗೂ ಕಲಾ ಪ್ರಪಂಚದ ಸ್ವಾಯತ್ತತೆ ಉಳಿಸಿಕೊಳ್ಳಲು ಸಾಧ್ಯ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೆಬ್ಬೂರು ನಾರಾಯಣ ಭಾಗವತರು, ‘ಯಕ್ಷಗಾನ ಕ್ಷೇತ್ರದಲ್ಲಿ ಪ್ರಶಸ್ತಿ ಕೊಡುವುದು ಮೂರು ದಶಕಗಳಿಂದೀಚೆಗೆ. ಇದು ಯೋಗ್ಯವಾದ ಕಾರ್ಯ. ಯಕ್ಷಗಾನದಲ್ಲಿ ಇಂಥ ಕಾರ್ಯ ಶ್ಲಾಘನೀಯ, ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವುದರ ಜತೆಗೆ ಅವರ ಜೀವನವನ್ನು ಮಾದರಿಯನ್ನಾಗಿಸಿಕೊಳ್ಳಬೇಕು ಎಂದ ಅವರು, ಅನಂತ ಹೆಗಡೆ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.

ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಕೊಳಗಿ ಅಧ್ಯಕ್ಷತೆ ವಹಿಸಿದ್ದರು. ವಿ. ಉಮಾಕಾಂತ ಭಟ್ಟ ಕೆರೇಕೈ ಅಭಿನಂದನಾ ಭಾಷಣ ಮಾಡಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ದಂಟ್ಕಲ್, ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಗೋಪಾಲಕೃಷ್ಣ ಶರ್ಮಾ ಬೆಂಗಳೂರು, ದತ್ತಮೂರ್ತಿ ಭಟ್ಟ, ಡಾ. ಕೆ. ಶ್ರೀಧರ ವೈದ್ಯ, ನಿವೃತ್ತ ಇಂಜಿನಿಯಯರ್ ಎಂ.ಎಸ್. ಜೋಶಿ ಉಪಸ್ಥಿತರಿದ್ದರು.

ಶ್ವೇತಾ ಅರೆಹೊಳೆ ಮಂಗಳೂರ ಅವರಿಂದ ಕೃಷ್ಣಾ ಎನಬಾರದೆ ನಾಟ್ಯ ಸಂಭ್ರಮ ಹಾಗೂ ತುಳಸಿ ಹೆಗಡೆ ಶಿರಸಿ ಅವರಿಂದ ಪರಿವರ್ತನೆ ಜಗದ ನಿಯಮ ನೂತನ ಯಕ್ಷ ನೃತ್ಯ ರೂಪಕ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೕಶ್ವರ ಕೆಸರಕೊಪ್ಪ ಸಹಕರಿಸಿದರು. ಗಣಪತಿ ಹೆಗಡೆ ಗುಂಜಗೋಡ, ಮಂಜುನಾಥ ಭಟ್ಟ ಬೆಂಗಳೂರು, ಜಿ.ಕೆ. ಭಟ್ಟ ಕಶಿಗೆ ಕಾರ್ಯಕ್ರಮ ನಿರ್ವಹಿಸಿದರು.