ಯೋಜನೆ ಅನುಷ್ಠಾನಕ್ಕೆ ಬ್ಯಾಂಕ್‌ಗಳ ಅಸಹಕಾರ

ಮೈಸೂರು: ಪ್ರತಿಯೊಬ್ಬರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿದ ಹಲವು ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕ್‌ಗಳಿಂದ ನಿರೀಕ್ಷಿತ ಪ್ರಮಾಣದ ಸಹಕಾರ ದೊರೆಯುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜ್ಯೋತಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಬ್ಯಾಂಕ್‌ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸ್ಟಾರ್ಟ್ ಅಪ್, ಮುದ್ರಾ ಯೋಜನೆಗಳಿಗೆ ಬ್ಯಾಂಕ್‌ಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಯುವ ಸಮುದಾಯ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಇಂಥ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆ ಜಾರಿಗೆ ಬಂದು ನಾಲ್ಕು ವರ್ಷ ಕಳೆದರೂ ಅಧಿಕಾರಿಗಳಿಗೆ ಯೋಜನೆಗಳ ಅರಿವಿಲ್ಲ. ಪರಿಣಾಮವಾಗಿ ಜಿಲ್ಲೆಯ ಆರ್ಥಿಕ ಸ್ವಾವಲಂಬನೆ, ನಿರುದ್ಯೋಗ ಸಮಸ್ಯೆ ಬಗೆಹರಿಸುವಲ್ಲಿ ಸಹಕಾರಿಯಾದ ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಾಚಲಪತಿ ಮಾತನಾಡಿ, ಮುದ್ರಾ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 25,670 ಫಲಾನುಭವಿಗಳಿಗೆ 512.52 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಮುದ್ರಾ, ಸ್ಟಾರ್ಟ್ ಅಪ್ ಯೋಜನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಯಾರಿಗೂ ಸ್ಪಷ್ಟ ಚಿತ್ರಣವೇ ಇಲ್ಲವಾಗಿದೆ. ಹೀಗಾಗಿ ನಾಲ್ಕು ವರ್ಷಗಳ ನಂತರ ಅಧಿಕಾರಿಗಳು ತರಬೇತಿ ಪಡೆಯಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಯೋಜನೆ ವಿಳಂಬವಾಗಿದೆ ಎಂದರು.

ಆರ್‌ಬಿಐನ ಸಹಾಯಕ ಪ್ರಧಾನ ವ್ಯವಸ್ಥಾಪಕ ನಾಗರಾಜ ಮಾತನಾಡಿ, ಜಿಲ್ಲಾ ಬ್ಯಾಂಕುಗಳ ತ್ರೈಮಾಸಿಕ ಸಭೆ ಬಹಳ ಮುಖ್ಯವಾದುದು. ಎಲ್ಲ ಬ್ಯಾಂಕ್‌ಗಳ ಪ್ರತಿನಿಧಿಗಳೂ ಹಾಜರಾಗಬೇಕು. ಕಳೆದ ಎರಡು ತ್ರೈಮಾಸಿಕ ಸಭೆಗೆ ಯಾವ ಬ್ಯಾಂಕ್‌ಗಳವರು ಬಂದಿಲ್ಲವೋ ಅವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳೋಣ ಎಂದು ಹೇಳಿದರು.

ವಿವಿಧ ಬ್ಯಾಂಕ್ ಅಧಿಕಾರಿಗಳು ಬಿಎಲ್‌ಬಿಸಿ ಮೀಟಿಂಗ್‌ಗೆ ಹೋಗಬೇಕು. ಅಧಿಕಾರಿಗಳು-ಬ್ಯಾಂಕ್ ನಡುವೆ ಸಮನ್ವಯತೆ ಮೂಡಿಸಲು ದಸರಾ ಬಳಿಕ ಕಾರ್ಯಾಗಾರ ನಡೆಸಲಾಗುವುದು ಎಂದರು.

ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ (ಡಿಡಿಎಂ) ಮಣಿಕಂಠನ್ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳಲ್ಲೂ ಸಬ್ಸಿಡಿ ಇರುತ್ತದೆ. ಆದರೂ ಸಾಲ ಕೊಡಲು ಬ್ಯಾಂಕ್ ಅಧಿಕಾರಿಗಳು ಸತಾಯಿಸುತ್ತಾರೆ ಎಂಬ ದೂರುಗಳಿವೆ. ಅದರಲ್ಲೂ ರೈತರಿಗೆ ಕೃಷಿ ಸಾಲ ನೀಡಲು ಹಿಂಜರಿಯಬಾರದು ಎಂದು ತಾಕೀತು ಮಾಡಿದರು. ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳು, ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲದವರು ಸುತ್ತೋಲೆ ಬಗ್ಗೆ ತಿಳಿದುಕೊಳ್ಳಿ. ನೀವೇ ಮಾಹಿತಿ ತಿಳಿದುಕೊಳ್ಳದೆ ರೈತರನ್ನೇ ಅರ್ಜಿ ತನ್ನಿ ಎಂದು ನಬಾರ್ಡ್ ಕಚೇರಿಗೆ ಕಳುಹಿಸಬೇಡಿ. ನೀವು ಮೊದಲು ಅರ್ಜಿ ಪಡೆಯಿರಿ, ಏನಾದರೂ ವ್ಯತ್ಯಾಸ ಇದ್ದರೆ ತಮ್ಮ ಗಮನಕ್ಕೆ ತರಬಹುದು ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು ಮಾತನಾಡಿ, ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಬ್ಯಾಂಕುಗಳು ಯಾರಿಗೆ ಸಾಲ ಕೊಡುತ್ತಾರೆ? ಎಷ್ಟು ಸಾಲ ಕೊಟ್ಟಿದ್ದಾರೆ ಎಂಬ ಮಾಹಿತಿಯೇ ತಿಳಿಯುವುದಿಲ್ಲ. ಯಾವ್ಯಾವುದೋ ಸಾಲವನ್ನು ಮುದ್ರಾ ಸಾಲಕ್ಕೆ ಜೋಡಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಇದ್ದರು.

Leave a Reply

Your email address will not be published. Required fields are marked *