More

    ಯೋಧ ಬಸವರಾಜನಿಗೆ ಅಂತಿಮ ವಿದಾಯ

    ಮುಳಗುಂದ: ಮಹಾರಾಷ್ಟ್ರದ ಪುಣೆಯ ರೈಲು ನಿಲ್ದಾಣದಲ್ಲಿ ರೈಲಿನಡಿ ಸಿಲುಕಿ ಸೋಮವಾರ ಮೃತಪಟ್ಟ ಪಟ್ಟಣದ ಯೋಧ ಬಸವರಾಜ ಹಿರೇಮಠ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಅವರ ಸ್ವಂತ ಹೊಲದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.

    ಬೆಳಗ್ಗೆ 7 ಕ್ಕೆ ಪಟ್ಟಣಕ್ಕೆ ಆಗಮಿಸಿದ ಯೋಧನ ಪಾರ್ಥಿವ ಶರೀರವನ್ನು ಕೆಲ ಸಮಯ ಅವರ ಮನೆಯ ಎದುರು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಯೋಧನ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

    ಅಂತ್ಯಕ್ರಿಯೆಯಲ್ಲಿ ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ಶಾಸಕ ಎಚ್.ಕೆ. ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಜಿ.ಪಂ. ಅಧ್ಯಕ್ಷ ಸಿದ್ದು ಪಾಟೀಲ, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ, ರವಿ ದಂಡಿನ, ಗದಗ ಅಪರ ಜಿಲ್ಲಾಧಿಕಾರಿ ಎಂ.ಸತೀಶ ಕುಮಾರ, ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಿಗಿ, ಗದಗ ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಗದಗ ಸಿಪಿಐ ರವಿಕುಮಾರ ಕಪ್ಪತ್ತನವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಸಂತಾಪ ಸೂಚಿಸಿದರು.

    ಬಾರದ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು: ಮೃತ ಯೋಧನ ದರ್ಶನ ಪಡೆಯಲು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಯೋಧನ ಅಂತಿಮ ದರ್ಶನಕ್ಕೆ ಬಾರದೆ ಇರುವುದು ಪಟ್ಟಣದ ಯುವ ಸಮೂಹ ಹಾಗೂ ವಿವಿಧ ಸಂಘಟನೆಗಳ ಸದಸ್ಯರಲ್ಲಿ ಬೇಸರ ಮೂಡಿಸಿತು.

    ಖರೀದಿಸಿದ ಹೊಲದಲ್ಲೇ ಮಣ್ಣಾದ: ಮೃತ ಯೋಧ ಬಸವರಾಜ ಕಳೆದ ಎರಡ್ಮೂರು ವರ್ಷಗಳ ಹಿಂದೆ ತಾನು ನಿವೃತ್ತಿಯಾದ ನಂತರ ತನ್ನ ಜೀವನೋಪಾಯಕ್ಕಾಗಿ ಯಾವುದಾದರೊಂದು ಉದ್ಯೋಗ ಮಾಡಿಕೊಂಡು ಇದ್ದರಾಯಿತು ಎಂದು ಒಂದು ಎಕರೆ ಜಮೀನು ಖರೀದಿಸಿದ್ದ. ಆದರೆ, ಅದೇ ಭೂಮಿಯಲ್ಲಿ ಇಂದು ಲಿಂಗಾಯತ ಧರ್ಮದ ವಿಧಿವಿಧಾನದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

    ಮುಗಿಲು ಮುಟ್ಟಿದ ಆಕ್ರಂದನ: ರಜೆಗೆ ಬಂದಿದ್ದ ಪಟ್ಟಣದ ಯೋಧ ಬಸವರಾಜ ಹಿರೇಮಠ ರಜೆ ಮುಗಿಸಿ ಮರಳಿ ಸೇವೆಗೆ ಹೋಗುವಾಗ ರೈಲಿನಡಿ ಸಿಲುಕಿ ಸೋಮವಾರ ಬೆಳಗ್ಗೆ ದುರಂತ ಸಾವನ್ನಪ್ಪಿದ್ದು, ಅವರ ಕುಟುಂಬ ಸದಸ್ಯರು ಹಾಗೂ ಬಂಧುಗಳಿಗೆ ದೊಡ್ಡ ಆಘಾತವಾಗಿದೆ. ಯೋಧನ ಪತ್ನಿ ಸಾವಿತ್ರಿ, ತಂದೆ ಶಂಕ್ರಯ್ಯ ಹಿರೇಮಠ ಹಾಗೂ ತಾಯಿ ಅನ್ನಪೂರ್ಣಾ ಹಾಗೂ ಸಹೋದರ ಸಹೋದರಿಯರ ಆಕ್ರಂದನ ಕರುಳು ಹಿಂಡುವಂತಿತ್ತು. ತನ್ನ ತಂದೆಗೆ ಏನಾಗಿದೆ ಎನ್ನುವುದನ್ನೂ ಅರಿಯದ ಮೂರು ವರ್ಷದ ಮಗ ಚೇತನ, ಎಲ್ಲರ ಮುಖ ನೋಡುತ್ತ ನಿಂತಿದ್ದನ್ನು ಕಂಡು ಜನ ಮಮ್ಮಲ ಮರುಗಿದರು. ‘ನಿನ್ನೆಯಷ್ಟೇ ರಜೆ ಮುಗಿಸಿ ತೆರಳಿದ ನನ್ನ ಮಗ ಇಂದು ಇಲ್ಲದಂತಾಗಿದೆ’ ಎಂದು ಬಸವರಾಜ ಹೆತ್ತವರು ಕಣ್ಣೀರು ಹಾಕುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts