ಯೋಧರ ಸಾವಿಗೆ ಕೇಂದ್ರದಿಂದ ತಕ್ಕ ಉತ್ತರ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಯೋಧರ ಹತ್ಯೆ ವ್ಯರ್ಥವಾಗಲು ಬಿಡುವುದಿಲ್ಲ. ಇದಕ್ಕೆ ಉಗ್ರರ ಮೇಲೆ ನಡೆದ ವೈಮಾನಿಕ ದಾಳಿಯೇ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರು ಭಾರತೀಯ ಯೋಧರ ಮೇಲೆ ನಡೆಸಿದ ದಾಳಿಗೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಿದೆ. ಕೊನೇ ಘಳಿಗೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್​ಗೆ ತಪ್ಪಿನ ಅರಿವಾಗಿ ಮಾತುಕತೆಗೆ ಸಿದ್ಧವೆಂದಿದ್ದರು. ಆದರೆ ಅದರಿಂದ ಉಪಯೋಗವಿಲ್ಲವೆಂದು ಪ್ರಧಾನಿ ಏರ್​ಸ್ಟ್ರೈಕ್ ಮೂಲಕ ಪಾಕ್​ಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

22 ಸ್ಥಾನಗಳಲ್ಲಿ ಗೆಲುವು:ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ 22 ಸ್ಥಾನ ಗೆಲ್ಲುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಬಿರುಸಿನ ಪ್ರವಾಸ ಕೈಗೊಳ್ಳಲಾಗಿದೆ. 28 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಸದ್ಯದಲ್ಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಪಟ್ಟಿ ನೀಡುತ್ತೇನೆ. ಅವರೇ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.

ಬಂಡೀಪುರ ಅರಣ್ಯ ನಾಶಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯೇ ಕಾರಣ. ಕಾಳ್ಗಿಚ್ಚಿನಿಂದ ಅಪಾರ ಅರಣ್ಯ ಸಂಪತ್ತು ನಾಶವಾಗಿದೆ ಮತ್ತು ಕಾಡು ಪ್ರಾಣಿಗಳ ಸಾವುಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಕಣ್ಣಿನ ಮುಂದೆ ಅದರ ಚಿತ್ರಣ ಬಂದರೆ ಕಣ್ಣಲ್ಲಿ ನೀರು ಬರುತ್ತದೆ. ಕಾಳ್ಗಿಚ್ಚಿನ ಮೊದಲ ದಿನವೇ ಹೆಲಿಕಾಪ್ಟರ್ ಮೂಲಕ ನೀರು ಹಾಕಿದ್ದರೆ ಕಾಳ್ಗಿಚ್ಚನ್ನು ನಿಯಂತ್ರಿಸಬಹುದಿತ್ತು ಎಂದರು.