ಯೋಜನಾ ಪ್ರಾಧಿಕಾರ ಹಲ್ಲು ಕಿತ್ತ ಹಾವು

ಚನ್ನಪಟ್ಟಣ: ಬೆಂಬಲಿಗರ ಹಿತ ಕಾಯಲು ಸೃಷ್ಟಿಸಿದ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಅತ್ತ ಅಧಿಕಾರವೂ ಇಲ್ಲದೇ, ಇತ್ತ ಅಧಿಕಾರಿಯೂ ಇಲ್ಲದೇ ಹಲ್ಲು ಕಿತ್ತ ಹಾವಿನಂತಾಗಿದೆ.

2017ರಲ್ಲಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವನ್ನು ವಿಭಜಿಸಿದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಎರಡೂ ನಗರಗಳಿಗೆ ಪ್ರತ್ಯೇಕ ಪ್ರಾಧಿಕಾರ ನೀಡಿದರು. ಆದರೆ ಎರಡು ವರ್ಷಗಳಿಂದ ನಗರದಲ್ಲಿ ಯೋಜನಾ ಪ್ರಾಧಿಕಾರ ಇದೆಯೇ ಎಂಬ ಗುಮಾನಿ ಸಾರ್ವಜನಿಕರನ್ನು ಕಾಡುತ್ತಿದೆ.

ಅಧಿಕಾರಕ್ಕಾಗಿ ವಿಭಜನೆ: 1994ರಲ್ಲಿ ರಚನೆಯಾದ ರಾಮನಗರ-ಚನ್ನಪಟ್ಟಣ ಪ್ರಾಧಿಕಾರವನ್ನು ವಿಭಜನೆ ಮಾಡಿದ್ದರ ಹಿಂದಿನ ಉದ್ದೇಶ ಬೆಂಬಲಿಗರಿಗೆ ಅಧಿಕಾರ ಕರುಣಿಸುವುದೇ ಆಗಿತ್ತು. ಅದರಂತೆ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಎ.ಸಿ.ವೀರೇಗೌಡ ನೇಮಕವಾದರು.

ಅಧ್ಯಕ್ಷರೂ ಇಲ್ಲ, ಕಾಯಂ ಅಧಿಕಾರಿಯೂ ಇಲ್ಲ: ಯೋಜನಾ ಪ್ರಾಧಿಕಾರ ರಚನೆಯಾದಾಗಿನಿಂದ ಕಾಯಂ ಅಧಿಕಾರಿ ನಿಯೋಜನೆ ಮಾಡಿಯೇ ಇಲ್ಲ. ಎರಡು ವರ್ಷಗಳಿಂದ ಕನಕಪುರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಗನ್ನಾಥ್​ಗೆ ಇಲ್ಲಿನ ಉಸ್ತುವಾರಿ ವಹಿಸಲಾಗಿದೆ. ವಾರಕ್ಕೆ ಎರಡು ಬಾರಿ ಬಂದು ಹೋಗುತ್ತಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದ್ದ ಪ್ರಾಧಿಕಾರದ ಅಧ್ಯಕ್ಷರ ಹುದ್ದೆ ಅವಧಿ ಮುಗಿದಿದ್ದು, ಹೊಸ ಸರ್ಕಾರ ರಚನೆಯಾಗಿ 13 ತಿಂಗಳು ಕಳೆದರೂ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಇದರಿಂದಾಗಿ ಪ್ರಾಧಿಕಾರ ಅತ್ತ ಕಾಯಂ ಅಧಿಕಾರಿಯೂ ಇಲ್ಲದೆ, ಅಧ್ಯಕ್ಷರೂ ಇಲ್ಲದೆ ಸೊರಗುತ್ತಿದೆ.

ಹೊರಗುತ್ತಿಗೆ ಆಧಾರದ ಮೇಲೆ ನಾಲ್ಕು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ನಗರದ ರಾಜಾಕೆಂಪೇಗೌಡ ಬಡಾವಣೆೆಯ ಖಾಸಗಿ ಕಟ್ಟಡದಲ್ಲಿ ವಿಶಾಲ ಕಚೇರಿಯನ್ನು ಬಾಡಿಗೆಗೆ ಪಡೆಯಲಾಗಿದೆ. ಆದರೆ, ಪ್ರಾಧಿಕಾರ ಇದೆ ಎಂಬ ಮಾಹಿತಿಯೇ ಗೊತ್ತಿಲ್ಲದ ಕಾರಣ ಕಚೇರಿ ಸಿಬ್ಬಂದಿಗೆ ಕೆಲಸವಿಲ್ಲದಂತಾಗಿದೆ.

ಸದ್ದೂ ಇಲ್ಲ, ಸುದ್ದಿಯೂ ಇಲ್ಲ: ಯೋಜನಾ ಪ್ರಾಧಿಕಾರ ಅಕ್ರಮ ಲೇಔಟ್​ಗಳ ವಿಚಾರದಲ್ಲಿ ಜಾಣ ಮೌನ ವಹಿಸಿದೆ. ನಗರದ ಅಭಿವೃದ್ಧಿಗೆ ಪೂರಕವಾಗುವ ಯೋಜನೆ ರೂಪಿಸದೆ, ಕೇವಲ ಮನೆಕಟ್ಟಲು ಪರವಾನಗಿ ಕೋರಿ ಅರ್ಜಿ ಸಲ್ಲಿಸುವವರಿಗೆ ನಿರಾಕ್ಷೇಪಣಾ ಪತ್ರ ನೀಡುವುದಕ್ಕಷ್ಟೇ ಸೀಮಿತಗೊಂಡಿದೆ.

ಸಂಪನ್ಮೂಲ ಕ್ರೋಡೀಕರಣ ಇಲ್ಲ: ನಗರ ಯೋಜನಾ ಪ್ರಾಧಿಕಾರಕ್ಕೆ ಸರ್ಕಾರದಿಂದ ಅನುದಾನ ಇಲ್ಲ. ಸಿಬ್ಬಂದಿ ಸಂಬಳ, ಕಚೇರಿ ಬಾಡಿಗೆ, ನಿರ್ವಹಣೆ ಸೇರಿ ಎಲ್ಲ ವೆಚ್ಚವನ್ನು, ನಿರಾಕ್ಷೇಪಣಾ ಪತ್ರ ನೀಡಲು ಪಡೆಯುವ ಶುಲ್ಕ, ಹೊಸ ಬಡಾವಣೆಗಳ ನಿಮಾಣಕ್ಕೆ ವಿಧಿಸುವ ಅಭಿವೃದ್ಧಿ ಶುಲ್ಕ, ಹೀಗೆ ಸ್ಥಳೀಯವಾಗಿಯೇ ಸಂಪನ್ಮೂಲ ಕ್ರೋಡೀಕರಿಸಬೇಕು. ಆದರೆ ಜಿಲ್ಲೆಯ ಇತರ ಪ್ರಾಧಿಕಾರಕ್ಕೆ ಹೋಲಿಕೆ ಮಾಡಿದರೆ ಈ ಪ್ರಾಧಿಕಾರ ಹಿಂದುಳಿದಿದೆ.

ನಗರ ಪ್ರದೇಶ, ಸುತ್ತಮುತ್ತಲ 25 ಗ್ರಾಮಗಳನ್ನು ಸೇರಿಸಿ ಯೋಜನಾ ಪ್ರಾಧಿಕಾರ ವಿಸ್ತರಣೆಗೆ ಮಾಸ್ಟರ್ ಪ್ಲಾ್ಯನ್ ಸಿದ್ಧಪಡಿಸಲಾಗಿತ್ತು. ಅಧ್ಯಕ್ಷರ ನೇಮಕಾತಿ ಆಗದಿರುವುದರಿಂದ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ.

| ಎ.ಸಿ.ವೀರೇಗೌಡ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಪ್ರಾಧಿಕಾರಕ್ಕೆ ತನ್ನದೇ ಆದ ಆಧಿಕಾರ ಇದೆ. ಅಧಿಕಾರಿಗಳು ಮತ್ತು ನೇಮಕವಾಗುವ ಅಧ್ಯಕ್ಷರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದೇ ಆದಲ್ಲಿ, ಪ್ರಾಧಿಕಾರಕ್ಕೆ ಸಂಪನ್ಮೂಲ ಹೆಚ್ಚಿಸುವ ಜತೆಗೆ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸಾಧ್ಯವಾಗುತ್ತದೆ.

| ಶಾರದಾಗೌಡ, ಮಾಜಿ ಅಧ್ಯಕ್ಷೆ, ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ

ಸರ್ಕಾರ ಮೊದಲು ಅಧ್ಯಕ್ಷರು ಮತ್ತು ಕಾಯಂ ಅಧಿಕಾರಿಗಳನ್ನು ನೇಮಿಸಬೇಕು. ಕೆಲ ಭೂಮಾಫಿಯಾದವರು ಮಾತ್ರ ಕಚೇರಿ ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ಶ್ರೀಸಾಮಾನ್ಯನಿಗೆ ಕಚೇರಿ ಇದೆ ಎಂಬುದೇ ತಿಳಿದಿಲ್ಲ.

| ಧರಣೀಶ್ ರಾಂಪುರ, ನಗರದ ನಿವಾಸಿ

Leave a Reply

Your email address will not be published. Required fields are marked *