ಯೋಗ ನಡಿಗೆಯಿಂದ ಆತ್ಮಹಿತ, ಲೋಕಹಿತ

ಆರೋಗ್ಯ ರಕ್ಷಣೆ ಹಾಗೂ ವರ್ಧನೆಯ ಉದ್ದೇಶದಿಂದ ಅಲ್ಲಲ್ಲಿ ಸಮಾನಾಸಕ್ತರ ಗುಂಪುಗಳು ಸಂಘಟಿತರಾಗಿ ತಮ್ಮದೇ ಕ್ಲಬ್​ಗಳನ್ನು ಹುಟ್ಟಿ ಹಾಕಿರುವುದು ಸರಿಯಷ್ಟೆ. ಅವುಗಳಲ್ಲಿ ಚಪ್ಪಾಳೆ ಕ್ಲಬ್, ಹಾಸ್ಯ ಸಂಘ, ಜಾಗಿಂಗ್ ಅಸೋಸಿಯೇಶನ್​ಗಳಂತೆ ಯೋಗ ನಡಿಗೆ ಅಥವಾ ಯೋಗಿಕ್ ವಾಕಿಂಗ್ ಕ್ಲಬ್​ಗಳೂ ರಚನೆಯಾಗಬೇಕು. ಏಕೆಂದರೆ, ಸಂಘಟನೆಯಲ್ಲಿ ನಡೆಯುವ ಕಾರ್ಯವು ಅಪಾರ ಶಕ್ತಿಯನ್ನು, ಪರಿಣಾಮವನ್ನು ನೀಡುತ್ತವೆ. ಒಟ್ಟಾಗಿ ನಡೆಸುವ ಪ್ರಾರ್ಥನೆ ಭಾವಸಂಸ್ಕಾರಗೊಳಿಸುವವು. ಗುಂಪಾದ ನಡಿಗೆ ಆತ್ಮವಿಶ್ವಾಸ, ಸಹಕಾರವನ್ನೂ ವರ್ಧಿಸುವುದು. ಚರ್ಚೆಗಳು ಏರ್ಪಟ್ಟು ವಿಚಾರ ಮಂಥನದೊಂದಿಗೆ ಉತ್ಸಾಹ, ಲವಲವಿಕೆ ತರುವುದು ಹಾಗೂ ಯಾರೊಬ್ಬರೂ ನಿರಂತರ ಅಭ್ಯಾಸದಿಂದ ತಪ್ಪಿಸಿಕೊಳ್ಳದಂತೆ ಕಾಳಜಿ ವಹಿಸುವುದು.

ಮೌನ ಪಾಲಿಸಿ: ಇಲ್ಲಿ ಮುಖ್ಯವಾಗಿ ಪಾಲಿಸಬೇಕಾದ ನಿಯಮವೆಂದರೆ ಯೋಗ ನಡಿಗೆಯ ಅಭ್ಯಾಸದ ಹೊತ್ತು ಮೌನವನ್ನು ಪಾಲಿಸಬೇಕು. ಅನಿವಾರ್ಯವಾಗಿ ಮಾತನಾಡಲೇ ಬೇಕಾದಲ್ಲಿ ಯೋಗ ಅಥವಾ ನಡಿಗೆಗೆ ಸಂಬಂಧಪಟ್ಟ ಮಾತುಗಳಿಗೆ ಸೀಮಿತವಾಗಿರಲಿ. ಸಮಯಕ್ಕೆ ಆರಂಭಗೊಂಡು ನಿಶ್ಚಿತ ಕಾಲಕ್ಕೆ ಮುಗಿಸುವುದು ಶಿಸ್ತನ್ನು ಮೂಡಿಸುವುದು. ಅಭ್ಯಾಸ ತಪ್ಪಿಸಿಕೊಳ್ಳದಂತೆ ನಿರಂತರತೆ ಕಾಪಾಡುವ ದೃಢ ಸಂಕಲ್ಪ ಮಾಡಬೇಕು. ಯೋಗ ನಡಿಗೆಯ ಮಾರ್ಗದರ್ಶನ ಒಮ್ಮೆಯಾದರೂ ಪಡೆದರೆ ಹೆಚ್ಚು ಪರಿಣಾಮಕಾರಿ.

ಸ್ಪರ್ಧೆ ಸಲ್ಲದು: ಯೋಗ ನಡಿಗೆಯಲ್ಲಿ ಇನ್ನೊಬ್ಬರೊಂದಿಗೆ ಎಂದಿಗೂ ಸ್ಪರ್ಧೆ ಬೇಡ. ಮೆಲ್ಲಮೆಲ್ಲನೆ ಆರಂಭಿಸಿ ಚಲಿಸುತ್ತ ಮಧ್ಯಮ ವೇಗವನ್ನು ಕ್ರಮೇಣ ತಲುಪುವಂತಿರಲಿ. ಪ್ರತಿಯೊಬ್ಬರ ದೇಹಭಾರ, ಆರೋಗ್ಯ ಭಿನ್ನವೆಂದು ನೆನಪಿರಲಿ. ಕೊನೆಯಲ್ಲಿ ನಡಿಗೆಯ ಲಕ್ಷ್ಯ, ಅನುಭವ, ಮನನೀಯ ಅಂಶಗಳನ್ನು ರ್ಚಚಿಸಿರಿ. ಆರಂಭದ ದಿನಗಳಲ್ಲಿ ನಡಿಗೆಯಿಂದಾಗುವ ಮೈ ಕೈ ನೋವುಗಳೇ ಟಾನಿಕ್ ಎಂಬುದನ್ನೂ ಮರೆಯಬಾರದು.

ನಡಿಗೆ ಯಜ್ಞ: ನಮ್ಮ ಉಸಿರು, ನೋಟ, ಶಬ್ದ, ಹೃದಯ ಬಡಿತ, ಚಲನೆ, ನಡಿಗೆ, ವಿಚಾರ, ಆಚಾರ ಎಲ್ಲವೂ ಪರಮಾತ್ಮಮಯ. ಈ ತತ್ವವನ್ನು ನಿತ್ಯ ಜೀವನದಲ್ಲಿ ಅನುಷ್ಠಾನ, ಅನುಸಂಧಾನಗೊಳಿಸಲು ಬೇಕಾದ ಶ್ರದ್ಧೆ, ತ್ಯಾಗ, ಸತತ ಪರಿಶ್ರಮ, ಅಭ್ಯಾಸ ಸಾಧನೆಯ ಯೋಗ ಯಜ್ಞ. ಯೋಗ ನಡಿಗೆ ಬಗ್ಗೆ ಸಮಗ್ರ ವಿವರವನ್ನು ಈವರೆಗೆ ತಿಳಿದದ್ದು ಆಯಿತು. ಇನ್ನು ಅದನ್ನು ಅನುಷ್ಠಾನಕ್ಕೆ ತರುವುದು ಎಲ್ಲರ ಜವಾಬ್ದಾರಿಯಾಗಬೇಕು. ಇದು ಒಂದು ದಿನ ಓದು ಮುಗಿಸುವುದು ಅಥವಾ ಮಾಡಿ ಮುಗಿಸುವ ಪ್ರಕ್ರಿಯೆ ಅಲ್ಲ. ಯೋಗ ನಡಿಗೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಯಜ್ಞ ರೂಪದಲ್ಲಿ ಪ್ರಕಟವಾಗಿರುವುದು ವಿಷ್ಣುವೇ ಎನ್ನುತ್ತದೆ ವೇದ. ವಿಷ್ಣುವಿಗೆ ಯಜ್ಞ ಎಂದೂ ಹೆಸರಿದೆ. ಯಜ್ಞೋ ಮೈ ವಿಷ್ಣುಃ ಎಂಬ ಉಕ್ತಿ ಇದನ್ನು ಧ್ವನಿಸುತ್ತದೆ. ವಿಷ್ಣು ಎಂದರೆ ಸರ್ವವ್ಯಾಪಿ, ಸರ್ವಾಂತರ್ಯಾಮಿ ಎಂಬುದು ಪ್ರಸಿದ್ಧವಾಗಿರುವ ಅರ್ಥ.

ಆತ್ಮಕಲ್ಯಾಣ: ಯಜ್ಞ ಯಾಗಗಳಿಂದ ಲೋಕ ಕಲ್ಯಾಣವಾದರೆ ಯೋಗ ನಡಿಗೆಯಿಂದ ಆತ್ಮ ಕಲ್ಯಾಣ. ನಡಿಗೆ, ಉಸಿರು, ಹೃದಯ ಆಲೋಚನೆಗಳಲ್ಲಿ ಒಂದಾಗುವುದೇ ಯೋಗ ನಡಿಗೆ. ನಮ್ಮ ಕಲ್ಯಾಣಕ್ಕಾಗಿ ಯೋಗ ನಡಿಗೆ ಒಂದು ಯಜ್ಞವಾಗಲಿ. ಅದರ ಪೂರ್ಣ ಫಲ ಪ್ರಾಪ್ತಿಗೆ ನಾವೆಲ್ಲರೂ ವ್ರತಧಾರಿಗಳಾಗೋಣ. ಯೋಗವೇ ಜೀವನವಾಗಲಿ. ಈ ಯೋಗ ನಡಿಗೆಯನ್ನು ದೈನಂದಿನ ಅಭ್ಯಾಸಕ್ಕಾಗಿ ಬಳಸಿಕೊಳ್ಳೋಣ. ಉಸಿರಲ್ಲಿ ಉಸಿರಾಗಿ ಬೆಳೆಸಿಕೊಳ್ಳೋಣ. ತನ್ಮೂಲಕ ಆತ್ಮಹಿತ, ಲೋಕಹಿತ ಸಾಧಿಸಲು ಸಬಲರಾಗೋಣ.

Leave a Reply

Your email address will not be published. Required fields are marked *