ಯೋಗ ದಿನಾಚರಣೆ ವ್ಯವಸ್ಥಿತವಾಗಿರಲಿ

ಗದಗ: ಜಿಲ್ಲೆಯಲ್ಲಿ ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳು ಪರಸ್ಪರ ಸಮನ್ವಯತೆಯಿಂದ ವ್ಯವಸ್ಥಿತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಶುಕ್ರವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೂ. 21ರಂದು ವಿವಿಧ ಶಾಲಾ-ಕಾಲೇಜ್, ಎನ್ನೆಸ್ಸೆಸ್ ಘಟಕ, ಗದಗ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿಗಳು, ಯೋಗ ಸಂಸ್ಥೆಯವರು, ಕ್ರೀಡಾಪಟುಗಳು ಹಾಗೂ ಯೋಗಾಸಕ್ತ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ ಮಾತನಾಡಿ, ಗದಗ ನಗರದ ಬಸವೇಶ್ವರ ಮೂರ್ತಿ ಆವರಣದಲ್ಲಿ ಜೂ. 21ರಂದು ಬೆಳಗ್ಗೆ 7ಕ್ಕೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಲಿದ್ದು, ಯೋಗ ಸಾಧಕರನ್ನು ಸನ್ಮಾನಿಸಲಾಗುವುದು. ಜೂ. 20ರಂದು ಬೆಟಗೇರಿಯಿಂದ ಜಾಗೃತಿ ಜಾಥಾ ಜರುಗಲಿದೆ ಎಂದು ಹೇಳಿದರು.

ಯೋಗ ದಿನಾಚರಣೆ ಕಾರ್ಯಕ್ರಮದ ವೇದಿಕೆ ವ್ಯವಸ್ಥೆ, ಅಲ್ಪೋಪಹಾರ, ಆಮಂತ್ರಣ ಪತ್ರಿಕೆ ಮುದ್ರಣ, ಬ್ಯಾನರ್ ವ್ಯವಸ್ಥೆ ಕುರಿತು ಸಭೆಯಲ್ಲಿ ಚರ್ಚೆಯಾಯಿತು.

ಜಿಪಂ ಸಿಇಒ ಮಂಜುನಾಥ ಚವ್ಹಾಣ, ಡಿಎಚ್​ಒ ಡಾ. ವಿರೂಪಾಕ್ಷರೆಡ್ಡಿ ಮಾದಿನೂರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *