ಯೋಗೇಶ್ವರ್ ಅಥವಾ ನಿಶಾ?

ರಾಮನಗರ: ಜಿಲ್ಲೆಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಭಾವಿ ರಾಜಕಾರಣಿಗಳನ್ನು ಹೊಂದಿರುವ ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಕಣಕ್ಕೆ ಇಳಿಯಲಿದ್ದು, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಇಲ್ಲವೇ ಅವರ ಪುತ್ರಿ ನಿಶಾ ಸ್ಪರ್ಧೆ ಬಹುತೇಕ ಖಚಿತವಾಗಿದೆ.

ಇದರ ನಡುವೆಯೇ ಅಭಿಮಾನಿಗಳ ನಡುವೆ ವಾಕ್ಸಮರ ಆರಂಭಗೊಂಡಿದ್ದು, ಜತೆಗೆ ವೇದಿಕೆ ಮೇಲೆ ನಾಯಕರು ಸಹ ಭರ್ಜರಿಯಾಗಿಯೇ ವಿರೋಧಿಗಳ ವಿರುದ್ಧ ಹರಿಹಾಯುತ್ತಿರುವುದು ಕದನ ಕಣವನ್ನು ಮತ್ತಷ್ಟು ರಂಗೇರಿಸಿದೆ. ಮತ್ತೊಂದೆಡೆ ಅನಿತಾ ಇನ್ನೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೇ ಇರುವುದು ಕಾಂಗ್ರೆಸಿಗರ ಕೋಪಕ್ಕೆ ಕಾರಣವಾಗಿದ್ದರೆ, ಜೆಡಿಎಸ್ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದೆ.

ರಾವಣ ಎಂದ ಸಿಪಿವೈ: ರಾಮನಗರದಲ್ಲಿ ಇರುವುದು ರಾವಣ ರಾಜ್ಯ, ಡಿ.ಕೆ.ಶಿವಕುಮಾರ್ ಕಪ್ಪು ಸಾಮ್ರಾಜ್ಯ ಎಂದು ಹೇಳುವ ಮೂಲಕ ಸಿ.ಪಿ.ಯೋಗೇಶ್ವರ್ ವಿರೋಧಿಗಳ ವಿರುದ್ಧ ಸಮರ ಸಾರಿದ್ದಾರೆ. ಇದಕ್ಕೆ ಪ್ರತಿಯಾಗಿ ಸಂಸದ ಡಿ.ಕೆ.ಶಿವಕುಮಾರ್ ಮತ್ತೊಂದು ಧಾಟಿಯಲ್ಲಿಯೇ ಉತ್ತರ ನೀಡುವ ಹಂತಕ್ಕೆ ಇಳಿದಿದ್ದಾರೆ.

ಇವ ನಮ್ಮವ ಎನ್ನುವ ಡಿಕೆ: ಸಹೋದರನ ಗೆಲುವಿಗಾಗಿ ಟೊಂಕಕಟ್ಟಿ ನಿಂತಿರುವ ಡಿ.ಕೆ.ಶಿವಕುಮಾರ್, ಪ್ರಥಮ ಬಾರಿ ಅನಿತಾ ಕುಮಾರಸ್ವಾಮಿ ವಿರುದ್ಧ ಲೋಕಸಭೆ ಉಪಚುನಾವಣೆ ಕಣದಲ್ಲಿದ್ದ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಿಕೊಂಡು ಬರಲು ಯೋಗೇಶ್ವರ್ ಅವರ ಬೆಂಬಲ ಕೋರಿದ್ದರು. ಬದ್ಧ ವೈರಿಗಳಾಗಿದ್ದರೂ ಸಹ ಎಲ್ಲವನ್ನೂ ಬದಿಗೊತ್ತಿದ್ದ ಡಿಕೆಶಿ, ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಯೋಗೇಶ್ವರ್ ಅವರನ್ನು ಓಲೈಸುವ ಮೂಲಕ ಸಹೋದರನ ಗೆಲುವಿನ ದಾರಿಯನ್ನು ಸುಗಮ ಮಾಡಿಕೊಂಡಿದ್ದರು.

ಆದರೆ, ಬದಲಾದ ಕಾಲಘಟ್ಟದಲ್ಲಿ ಯೋಗೇಶ್ವರ್ ಬಿಜೆಪಿಗೆ ಹೋಗುತ್ತಿದ್ದಂತೆ ಕಳೆದ ನವೆಂಬರ್​ನಲ್ಲಿ ಕನಕಪುರದ ದೇಗುಲ ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯೋಗೇಶ್ವರ್ ಎಂದರೇ ನನಗೆ ಗೊತ್ತೇ ಇಲ್ಲ. ನೀವೇ ಯಾರೆಂದು ಜ್ಞಾಪಿಸುತ್ತಿದ್ದೀರಿ ಎಂದು ವ್ಯಂಗವಾಡಿದ್ದರು. ಆದರೆ, ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಸಹೋದರನ ಗೆಲುವಿಗೆ ಯೋಗೇಶ್ವರ್ ಸಹ ಕಾರಣರು, ಈ ಬಾರಿಯೂ ನಮಗೆ ಬೆಂಬಲ ನೀಡುತ್ತಾರೆ ಎನ್ನುವ ಹೇಳಿಕೆ ನೀಡಿ ಅಚ್ಚರಿಗೆ ಕಾರಣವಾಗಿದ್ದಾರೆ.

ಸಂಚಲನ ಹುಟ್ಟಿಸಿದ ಸುದ್ದಿ: ಬುಧವಾರ ಕ್ಷೇತ್ರದಾದ್ಯಂತ ಬಿಜೆಪಿ ಅಭ್ಯರ್ಥಿಯಾಗಿ ಯೋಗೇಶ್ವರ್ ಪುತ್ರಿ ನಿಶಾ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುದ್ದಿ ಹರಿದಾಡಿ ಸಂಚಲನಕ್ಕೆ ಕಾರಣವಾಗಿತ್ತು. ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರತಿ ಚುನಾವಣೆ ವೇಳೆಯಲ್ಲೂ ತಂದೆಯ ಬೆನ್ನಿಗೆ ನಿಂತು ಕಾರ್ಯನಿರ್ವಹಿಸುವ ನಿಶಾ, ಈ ಬಾರಿ ಡಿ.ಕೆ.ಸುರೇಶ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. ಬಹುತೇಕ ಟಿಕೆಟ್ ಖಾತ್ರಿಯಾಗಿದೆ ಎನ್ನುವ ಸುದ್ದಿ ಬುಧವಾರ ಮುಂಜಾನೆಯಿಂದಲೇ ಹರಿದಾಡಿತು. ಆದರೆ ಸಂಜೆಯಾದರೂ ಇದು ಖಾತ್ರಿಯಾಗಲೇ ಇಲ್ಲ. ಅಲ್ಲದೆ ಬಿಜೆಪಿ ನಾಯಕರೂ ಇದನ್ನು ಖಾತ್ರಿ ಪಡಿಸಲು ಮುಂದಾಗಲಿಲ್ಲ.

ಕಾರ್ಯಕರ್ತರ ಗೊಂದಲ: ಜೆಡಿಎಸ್ ಕಾರ್ಯಕರ್ತರಲ್ಲಿ ಸದ್ಯದ ಮಟ್ಟಿಗೆ ಎಲ್ಲವೂ ಸರಿ ಇಲ್ಲ ಎನ್ನುವ ವಾತಾವರಣ ನಿರ್ವಣವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಸಭೆ ನಡೆಸಿ ಡಿ.ಕೆ.ಸುರೇಶ್ ಗೆಲುವಿಗೆ ಶ್ರಮಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದರೂ, ಇದನ್ನು ಪಾಲಿಸುವ ಮನಸ್ಥಿತಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಇಲ್ಲ. ಕಾರಣ ಲೋಕಸಭೆ ಚುಣಾವಣೆ ಮುಗಿಯುತ್ತಿದ್ದಂತೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗುವುದರಿಂದ ಆಗ ಜನರ ಬಳಿಗೆ ತೆರಳಿ ಮತ ಕೇಳುವುದು ಹೇಗೆಂಬ ಗೊಂದಲ ಕಾಡುತ್ತಿದೆ. ಒಟ್ಟಾರೆಯಾಗಿ ಲೋಕಸಭೆ ಚುನಾವಣೆ ಕಣ ದಿನಕ್ಕೊಂದು ತಿರುವು, ಕುತೂಹಲ ಮೂಡಿಸುತ್ತಿದ್ದು, ಮತದಾನ ಹತ್ತಿರವಾಗುತ್ತಿದ್ದಂತೆ ಮತ್ತಷ್ಟು ರೋಚಕ ಘಟನೆಗಳಿಗೆ ಸಾಕ್ಷಿಯಾಗಲಿದೆ.

ಬಾರದ ಅನಿತಾ, ಮಂಡ್ಯದಲ್ಲಿ ಬ್ಯುಸಿ: ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ರಾಮನಗರದಲ್ಲಿ ದಾಖಲೆ ಜಯ ದಾಖಲಿಸಿದ ಅನಿತಾ ಕುಮಾರಸ್ವಾಮಿ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಮನಗರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅನಿತಾ ಅವರ ಗೆಲುವಿಗೆ ಶ್ರಮಿಸಿದ್ದವರು ಡಿ.ಕೆ.ಸುರೇಶ್, ಆದರೆ ಈ ಬಾರಿ ಅವರ ಸ್ಪರ್ಧೆ ಖಚಿತವಾಗಿದ್ದರೂ, ಪುತ್ರ ನಿಖಿಲ್ ಗೆಲುವಿಗಾಗಿ ಮಂಡ್ಯದಲ್ಲಿ ಬಿಜಿಯಾಗಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದರೆ, ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಬೀಳುವಂತೆ ಮಾಡಿದೆ.