‘ಯೋಗಮಯ ಉತ್ತರ ಕನ್ನಡ’ ಅಭಿಯಾನ 21ರಿಂದ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ಯೋಗ ಬೆಳೆಯಬೇಕು. ಪ್ರಪಂಚವೇ ಮೆಚ್ಚಿದ ಯೋಗವನ್ನು ಎಲ್ಲೆಡೆ ಪಸರಿಸಬೇಕು ಎಂಬ ಸಂಕಲ್ಪದೊಂದಿಗೆ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಸಹಯೋಗದಲ್ಲಿ ‘ಯೋಗಮಯ ಉತ್ತರ ಕನ್ನಡ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಜೂ.21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಈ ಮಹತ್ತರ ಸಂಕಲ್ಪವನ್ನು ಅನುಷ್ಠಾನಗೊಳಿಸಲು ಪತಂಜಲಿ ನಿರ್ಧರಿಸಿದೆ. 2020 ಜೂನ್21ರವರೆಗೆ ಜಿಲ್ಲೆಯ ಮೂಲೆ ಮೂಲೆಗೂ ಯೋಗ ತಲುಪಿಸಲು ಪ್ರತಿ ದಿನ ಅಭಿಯಾನದ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕುರಿತು 500 ಶಿಕ್ಷಕರು ಜಿಲ್ಲೆಯ ಎಲ್ಲಡೆ ತೆರಳಿ ಯೋಗ ತರಬೇತಿ ನೀಡಲು ಸಜ್ಜಾಗಿದ್ದಾರೆ.

ಅನುಷ್ಠಾನ ಹೇಗೆ?: ಜಿಲ್ಲೆಯ 217 ಗ್ರಾಮ ಪಂಚಾಯಿತಿ ಮಟ್ಟದಲ್ಲಿ 180 ಸಮಿತಿಗಳನ್ನು ಪತಂಜಲಿ ರಚಿಸಿದೆ. ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಗ ಪ್ರಸಾರಕ್ಕೆ ಮಹತ್ವ ನೀಡಲಾಗಿದೆ. ಪತಂಜಲಿ ಯೋಗ ಸಮಿತಿ ಆಯ್ಕೆ ಮಾಡಿದ ಶಿಕ್ಷಕರು ಸಮಿತಿ ಸಹಕಾರದೊಂದಿಗೆ ಸ್ಥಳೀಯರನ್ನು ಒಂದುಗೂಡಿಸಿ ಒಂದು ವಾರ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಪಾಲ್ಗೊಂಡವರಿಗೆ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾದ, ಪ್ರತಿ ದಿನ ಮುಂಜಾನೆ ಮಾಡಬಹುದಾದಷ್ಟು ಯೋಗವನ್ನು ಹೇಳಿಕೊಡಲಾಗುತ್ತದೆ. ಇಲ್ಲಿ ತರಬೇತಿ ಪಡೆದವರಿಂದಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇನ್ನಷ್ಟು ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಪತಂಜಲಿಯ ಪ್ರಮುಖರು ಆಗಾಗ ಭೇಟಿ ನೀಡಿ ಸಮಿತಿಗಳು ಮತ್ತು ಶಿಬಿರಗಳಲ್ಲಿ ಪಾಲ್ಗೊಳ್ಳುವವರಿಗೆ ಮಾರ್ಗದರ್ಶನ ನೀಡಲಿದ್ದಾರೆ. 2020ರ ಜೂನ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಯೋಗ ಪ್ರಸಾರದ ಅವಲೋಕನ ನಡೆಸಲು ಪತಂಜಲಿ ಯೋಗ ಸಮಿತಿ ಪ್ರಮುಖರು ನಿರ್ಧರಿಸಿದ್ದಾರೆ.

ಯೋಗ ದಿನಾಚರಣೆಯಂದು ಚಾಲನೆ:ಜೂ.21ರಂದು ಯೋಗಮಯ ಉತ್ತರ ಕನ್ನಡ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ನಗರದ ಕುಮಟಾ ರಸ್ತೆ ದೈವಜ್ಞ ಕಲ್ಯಾಣ ಮಂಟಪದಲ್ಲಿ ಅಂದು ಬೆಳಗ್ಗೆ 5.30ಕ್ಕೆ ಯೋಗ ಕಾರ್ಯಕ್ರಮ ಆರಂಭಗೊಳ್ಳಲಿದೆ. ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್, ಪತಂಜಲಿ ಕಿಸಾನ್ ಸೇವಾ ಸಮಿತಿ ಸಹಕಾರದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ವಾಹಿನಿ ಸಹಯೋಗ ನೀಡಿದೆ. 500ಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ.

ಯೋಗ ವಿದ್ಯೆಗೆ ಗುರು ಉಪದೇಶ ಬೇಕೇ ಬೇಕು. 500 ಯೋಗ ಶಿಕ್ಷಕರು ಉತ್ತರ ಕನ್ನಡ ಜಿಲ್ಲಾದ್ಯಂತ ಜೂ.21ರಿಂದ ಯೋಗ ವಿದ್ಯೆ ಕಲಿಸಿಕೊಡಲಿದ್ದಾರೆ. ಆ ಬಳಿಕ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಒಂದು ವರ್ಷ ಕಾಲ ನಿರಂತರ ಯೋಗ ನಡೆಸಲಾಗುತ್ತದೆ.

| ರಾಮಚಂದ್ರ ಹೆಗಡೆ. ಮುಖ್ಯ ಸಂಯೋಜಕ, ಭಾರತ ಸ್ವಾಭಿಮಾನ ಟ್ರಸ್ಟ್, ಉತ್ತರ ಕನ್ನಡ.

Leave a Reply

Your email address will not be published. Required fields are marked *