
ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿತ ಅಭ್ಯರ್ಥಿ ಎಚ್.ಎಸ್ ಮಂಜುನಾಥ್ ಅತ್ಯಧಿಕ ಮತ ಪಡೆದಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ದೀಪಿಕಾ ರೆಡ್ಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಈ ಬಾರಿಯ ಚುನಾವಣೆ ನಿಯಮಾವಳಿ ಪ್ರಕಾರ ಅತೀ ಹೆಚ್ಚು ಮತ ಪಡೆದ ಮೂವರು ಅಭ್ಯರ್ಥಿಗಳೊಂದಿಗೆ ಪಕ್ಷದ ಅಧ್ಯಕ್ಷರು ಸಂದರ್ಶನ ನಡೆಸಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವರು. ಉಳಿದಿಬ್ಬರಿಗೆ ಉಪಾಧ್ಯಕ್ಷ ಸ್ಥಾನ ನೀಡುವರು.
ಶುಕ್ರವಾರ ಎಐಸಿಸಿ ಚುನಾವಣೆ ಸಮಿತಿಯು ಯುವ ಕಾಂಗ್ರೆಸ್‌ನ ಎಲ್ಲ ಹಂತದ ಘಟಕಗಳಿಗೆ ಐದು ತಿಂಗಳ ಹಿಂದೆ ನೋಂದಣಿ ಸಹಿತ ಚುನಾವಣೆ ನಡೆಸಿತ್ತು. ರಾಜ್ಯ ಘಟಕ, ಜಿಲ್ಲಾ ಘಟಕ, ಬ್ಲಾಕ್ ಘಟಕದ ವಿವಿಧ ಹುದ್ದೆಗಳಿಗೆ ಏಕ ಕಾಲಕ್ಕೆ ಮತದಾನ ನಡೆದಿತ್ತು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುನಾಥ್ 5,67,343 ಮತ ಪಡೆದರೆ, ದೀಪಿಕಾ ರೆಡ್ಡಿ 2,95,705 ಮತ, ಅಬ್ದುಲ್ ರಹಿಮಾನ್ 45,968 ಮತ ಗಳಿಸಿದ್ದರು.