ಯುವಕರಿಗೆ ಸಾಧಿಸುವ ತುಡಿತ ಇರಲಿ

ಹುಬ್ಬಳ್ಳಿ: ಉದ್ಯೋಗ ನಿಮಿತ್ತ ಬೇರೆ ಬೇರೆ ಕಡೆ ನೆಲೆಸಿರುವ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್​ಬಿ) ಸಮಾಜದ ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ವೆಂಚುರಾ ಕ್ಯಾಪಿಟಲ್ ಫಂಡ್ ಸ್ಥಾಪಿಸಿ ಯುವಕರಿಗೆ ಪ್ರೋತ್ಸಾಹ ನೀಡುವತ್ತ ಆದ್ಯತೆ ನೀಡಬೇಕು. ಯುವಕರು, ವಿದ್ಯಾರ್ಥಿಗಳಲ್ಲಿ ಸಾಧಿಸುವ ತುಡಿತ ಇರಬೇಕು ಎಂದು ಕುಮಟಾದ ಕೊಂಕಣ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಉದ್ಯಮಿ ಮುರಳೀಧರ ಪ್ರಭು ಹೇಳಿದರು.

ಇಲ್ಲಿಯ ಜಿಎಸ್​ಬಿ ಸಮಾಜದಿಂದ ಸೋಮವಾರ ಸಂಜೆ ಜೆ.ಸಿ. ನಗರದ ಸರಸ್ವತಿ ಸದನದಲ್ಲಿ ಹಮ್ಮಿಕೊಂಡಿದ್ದ ಸಮಾಜ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು. ಜತೆಗೆ ನಿರ್ಬಂಧಗಳೂ ಇರಲಿ. ಮೊಬೈಲ್​ನಂಥವು ವಿದ್ಯಾರ್ಥಿಗಳ ಬದುಕಿಗೆ ಮಾರಕವಾಗುತ್ತಿವೆ. ಉತ್ತಮ ಸಂಸ್ಕಾರ ನೀಡುವಲ್ಲಿ ಪಾಲಕರ, ಅದರಲ್ಲೂ ತಾಯಂದಿರ ಪಾತ್ರ ಹಿರಿದು. ಗಾಯತ್ರಿ ಮಂತ್ರ ಪಠಣದಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ. ಮೂಲ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದರು. ಸಮಾಜದ ಅಧ್ಯಕ್ಷ ಆರ್.ಎನ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಅತ್ಯುತ್ತಮ ಸ್ವಯಂ ಸೇವಕರಿಗೆ ಕೊಡಮಾಡುವ ರಂಗಪ್ಪ ಕಾಮತ್ ರೋಲಿಂಗ್ ಶೀಲ್ಡ್​ಅನ್ನು ವಿದ್ಯಾ ಉಪೇಂದ್ರ ನಾಯಕ ಅವರಿಗೆ, ಶೇಷಗಿರಿ ಕಾಮತ ರೋಲಿಂಗ್ ಶೀಲ್ಡ್​ಅನ್ನು ಪ್ರಕಾಶ ಎನ್. ಪ್ರಭು ಅವರಿಗೆ ಪ್ರದಾನ ಮಾಡಲಾಯಿತು. ಹಿರಿಯ ನಾಗರಿಕರಾದ ಡಾ. ಜಿ.ವಿ. ನಾಯಕ, ಅರುಣ ಶಾನಭಾಗ, ವಾಸುದೇವ ಶೆಣೈ ದಂಪತಿಯನ್ನು ಸನ್ಮಾನಿಸಲಾಯಿತು. 59 ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಮಹೇಶ ಮಾನಗೆ, ಪ್ರಮೋದ ಕಾಮತ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ಸದಾನಂದ ಕಾಮತ ವಂದಿಸಿದರು.

Leave a Reply

Your email address will not be published. Required fields are marked *