More

  ಯುವಕರಿಗೆ ಧರ್ಮ ದರ್ಶನದ ಅರಿವು ಅಗತ್ಯ

  ಧಾರವಾಡ: ಆಧುನಿಕ ಯುಗದಲ್ಲಿ ಜನರು ದೇವರ ಭಜನೆ ಮರೆತು ಅನ್ಯ ಕಾರ್ಯಗಳಲ್ಲೇ ತೊಡಗಿದ್ದಾರೆ. ಮಕ್ಕಳಿಗೆ ಧರ್ಮದ ದರ್ಶನ ಮಾಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಜೈನ ಸೋಂದಾ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.

  ಭಾರತೀಯ ಜೈನ್ ಮಿಲನ್ ವಲಯ-8ರ ವತಿಯಿಂದ ಇಲ್ಲಿನ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆಗೆ ಶನಿವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಮಕ್ಕಳಿಗೆ ನಮ್ಮ ಪರಂಪರೆ ಹಾಗೂ ಸಂಸ್ಕಾರಗಳನ್ನು ಕಲಿಸಬೇಕು. ಅನಿತಾ ಸುರೇಂದ್ರಕುಮಾರರ ಪರಿಕಲ್ಪನೆಯಲ್ಲಿ ಮೂಡಿಬಂದಂತಹ ಜಿನ ಭಜನೆ ಸ್ಪರ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿ ಮನೆಯಲ್ಲೂ ಭಜನೆಯಿಂದ ಸಾಮಾಜಿಕ ಪರಿವರ್ತನೆಯಾಗುತ್ತದೆ ಎಂದರು.

  ಎಸ್​ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಶಿಕ್ಷಣವನ್ನು ಪೈಪೋಟಿ ಮೇಲೆ ನಡೆಸುತ್ತಿದ್ದೇವೆ. ಮಕ್ಕಳಿಗೆ ಅಂಕಗಳನ್ನು ಮಾತ್ರ ಕೇಳುತ್ತಿದ್ದು, ಬದುಕುವ ಕಲೆ ತಿಳಿಸುವುದು ಪಠ್ಯದಿಂದ ಹೊರಗುಳಿದು ನಿರ್ಲಕ್ಷ್ಯ್ಕೆ ಒಳಗಾಗಿದೆ. ಇಂದಿನ ಯುವಕರಲ್ಲಿ ಸಣ್ಣ ತೊಂದರೆ ಎದುರಿಸುವ ಸಾಮರ್ಥ್ಯವೂ ಇಲ್ಲವಾಗಿದೆ. ಇದಕ್ಕೆ ಕಾರಣವಾಗಿರುವ ಮನಸ್ಸನ್ನು ಭಕ್ತಿ ಮಾರ್ಗದ ಮೂಲಕ ಸಂಯಮದಲ್ಲಿ ಇರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

  ಶ್ರೀ ಜಿನಕೀರ್ತಿ ಸ್ವಾಮೀಜಿ, ಹೇಮಾವತಿ ಹೆಗ್ಗಡೆ, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರಕುಮಾರ, ಪದ್ಮಲತಾ ನಿರಂಜನಕುಮಾರ, ಎಸ್​ಡಿಎಂಇ ಸೊಸೈಟಿ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಆಡಳಿತ) ನರೇಂದ್ರ ಜೈನ್ ರಾಜಕಮಲ್, ಪುಷ್ಪರಾಜ್ ಜೈನ್, ಕೆ. ಪ್ರಸನ್ನಕುಮಾರ, ರಾಜೇಶ ಎಂ., ಸುಮನಾ ವಜ್ರಕುಮಾರ, ಸುಪ್ರಿಯಾ ಹರ್ಷೆಂದ್ರಕುಮಾರ, ಇತರರು ಇದ್ದರು.

  ಜನಮನ ಸೆಳೆದ ಭಜನೆ: ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಅವರು ತಮ್ಮ ಆಶೀರ್ವಚನಕ್ಕೂ ಪೂರ್ವದಲ್ಲಿ ಪಾರಸನಾಮ ಎಂಬ ಭಜನೆ ಹಾಡಿದ್ದು ವಿಶೇಷವಾಗಿತ್ತು. ನಂತರ ಕಿರಿಯ ಹಾಗೂ ಹಿರಿಯ ವಿಭಾಗದ ಸ್ಪರ್ಧಾಳುಗಳು ಪ್ರಸ್ತುತಪಡಿಸಿದ ಭಜನೆಗಳು ಜನಮನ ಸೂರೆಗೊಂಡವು. ವಿವಿಧ ಜಿಲ್ಲೆಗಳಿಂದ ಸುಮಾರು 50 ತಂಡಗಳು ಭಾಗವಹಿಸಿವೆ.

  ಸ್ಪರ್ಧೆಗಳಲ್ಲಿ ಸೋಲು, ಗೆಲುವು ಸಹಜ. ಭಕ್ತಿಯಿಂದ ಭಜನೆ ಮಾಡಿದರೆ ಅದರ ಫಲ ನಮಗೆ ಸಿಕ್ಕೇ ಸಿಗುತ್ತದೆ. ಇಂತಹ ಆರೋಗ್ಯಕರ ಸ್ಪರ್ಧೆಗಳನ್ನು ನಡೆಸುವುದರಿಂದ ಮಕ್ಕಳು ಟಿವಿ, ಮೊಬೈಲ್​ಗಳಿಂದ ದೂರವಾಗಿ ಅಧ್ಯಾತ್ಮದತ್ತ ಒಲವು ತೋರಲು ಅನುಕೂಲವಾಗುತ್ತದೆ.
  | ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ನವಗ್ರಹ ಶ್ರೀ ಕ್ಷೇತ್ರ ವರೂರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts