ಸಿನಿಮಾ

ಯುಪಿಎಸ್‌ಸಿಯಲ್ಲಿ 501ನೇ ರ‌್ಯಾಂಕ್ ಪಡೆದುಕೊಂಡ ಅರಸೀಕೆರೆ ಧನುಷ್ ಕುಮಾರ್

ಹಾಸನ: ಕೇಂದ್ರ ಲೋಕಸೇವಾ ಆಯೋಗ 2022ರ ಯುಪಿಎಸ್‌ಸಿ ಫಲಿತಾಂಶ ಪ್ರಕಟ ಮಾಡಿದ್ದು, ಹಾಸನ ಜಿಲ್ಲೆಯ ಅರಸೀಕೆರೆಯ ಬಿ.ಎಸ್. ಧನುಷ್ ಕುಮಾರ ಅವರು 501 ರ‌್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಧನುಷ್ ಅವರು ಪ್ರಾಥಮಿಕ ಶಿಕ್ಷಣವನ್ನು ಅರಸೀಕೆರೆ ಪಟ್ಟಣದ ಕನ್ನಿಕಾ ಶಾಲೆಯಲ್ಲಿ ಪಡೆದರು. ಆರನೇ ತರಗತಿಗೆ ಬೆಂಗಳೂರಿಗೆ ತೆರಳಿದರು. ಬಳಿಕ ಬೆಂಗಳೂರಿನ ಬಿಎಂಎನ್‌ಐಟಿ ಕಾಲೇಜಿನಲ್ಲಿ ಇಂಜಿನಿಯರ್ ಸಿಎಸ್ ಪದವಿ ಪಡೆದರು.
ಚಿಕ್ಕ ವಯಸ್ಸಿನಲ್ಲೇ ತಂದೆ ಬಿಟ್ಟು ಹೋದ ಬಳಿಕ ಸಂಪೂರ್ಣವಾಗಿ ತಾಯಿ ಚೇತನಾ (ಶೋಭಾ) ಅವರ ಆರೈಕೆಯಲ್ಲಿ ಬೆಳೆದ ಧನುಷ್, ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು ಸಂದರ್ಶನದ ಹಂತದವರೆಗೂ ಹೋಗಿ ವಿಫಲರಾಗುತ್ತಿದ್ದರು. ಸತತ ಪರಿಶ್ರಮದಿಂದ ಈ ಬಾರಿ 501 ರ‌್ಯಾಂಕ್ ಪಡೆದುಕೊಂಡಿದ್ದಾರೆ.
ವಿಜಯವಾಣಿಯೊಂದಿಗೆ ಮಾತನಾಡಿದ ಧನುಷ್ ಕುಮಾರ್ ಅವರು, ‘ನನಗೆ ಈಗ ಬಂದಿರುವ ರ‌್ಯಾಂಕ್ ಮೇಲೆ ಐಪಿಎಸ್ ಸಿಗುತ್ತದೆ. ನಾನು ಕೂಡ ಐಪಿಎಸ್ ಆಗಬೇಕು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ. ಐಪಿಎಸ್ ಅಧಿಕಾರಿ ಜೀತೇಂದ್ರ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದೆ. ಎಡಿಜಿಪಿ ಶರತ್ ಚಂದ್ರ ಅವರ ಮಾರ್ಗದರ್ಶನ ಮತ್ತು ಸಹಾಯದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡಿದ್ದೇನೆ. ನನ್ನ ಸ್ನೇಹಿತರೆಲ್ಲರೂ ಇಂಜಿನಿಯರಿಂಗ್ ಮುಗಿದ ಮೇಲೆ ವಿದೇಶಕ್ಕೆ ಉದ್ಯೋಗ ಅರಸಿ ಹೋದರು. ಆದರೆ ನಾನು ದೇಶ ಸೇವೆ ಮಾಡಬೇಕೆಂಬ ಆಸೆಯಿಂದ ಆಚಲ ವಿಶ್ವಾಸದೊಂದಿಗೆ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡು ಕಠಿಣ ಪರಿಶ್ರಮ ಹಾಕಿ ಓದಿದೆ. ಇಂದು ಫಲ ನೀಡಿದೆ,’ ಎಂದು ತಮ್ಮ ಸಂತಸ ಹಂಚಿಕೊಂಡರು.
ಇವರು ಮೂಲತಃ ಹಾಸನ ಜಿಲ್ಲೆಯ ರುದ್ರನಹಳ್ಳಿ ಗ್ರಾಮದ ಕಂತೆನಹಳ್ಳಿ ರಾಮಣ್ಣ ಮತ್ತು ಲಕ್ಷ್ಮಮ್ಮ ಎಂಬುವವರ ಮೂಮ್ಮಗನಾಗಿದ್ದಾರೆ.

Latest Posts

ಲೈಫ್‌ಸ್ಟೈಲ್