ಯುಟಿಪಿ ಕಚೇರಿಗೆ ಬೀಗ ಜಡಿದು ಆಕ್ರೋಶ

ರಾಣೆಬೆನ್ನೂರ: ತಾಲೂಕಿನ ಹರನಗಿರಿ ವ್ಯಾಪ್ತಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಂಡ ಜಮೀನುಗಳ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಭೂಮಿ ಕಳೆದುಕೊಂಡ ರೈತರು ಸೋಮವಾರ ನಗರದ ಯುಟಿಪಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಹಲವು ವರ್ಷದ ಹಿಂದೆ ಹರನಗಿರಿ ಗ್ರಾಮದ ಬಳಿ ಯುಟಿಪಿ ಕಾಲುವೆ ನಿರ್ವಣಕ್ಕಾಗಿ 80ಕ್ಕೂ ಅಧಿಕ ರೈತರ 100ಕ್ಕೂ ಅಧಿಕ ಎಕರೆಯಷ್ಟು ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಈವರೆಗೂ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡಿ ಸುಸ್ತಾಗಿ ಹೋಗಿದ್ದಾರೆ. ಅಧಿಕಾರಿಗಳು ಇಂದು, ನಾಳೆ ಎನ್ನುತ್ತ ಕಾಲ ಕಳೆಯುತ್ತಿದ್ದಾರೆ ಹೊರತು ಪರಿಹಾರ ಮಾತ್ರ ನೀಡಿಲ್ಲ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಕಚೇರಿಗೆ ಬೀಗ ಹಾಕಿದ್ದು, ಪರಿಹಾರ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು.

ಸ್ಥಳಕ್ಕೆ ಬಂದ ಯುಟಿಪಿ ವಿಶೇಷ ಭೂ ಸ್ವಾಧೀನಾಧಿಕಾರಿ ಎಲ್.ಎನ್. ಕಿತ್ತೂರ ಮಾತನಾಡಿ, ಅಧಿಕಾರಿಗಳು ಮೇಲಿಂದ ಮೇಲೆ ಬದಲಾವಣೆ ಆಗಿದ್ದರಿಂದ ಪರಿಹಾರ ನೀಡುವಲ್ಲಿ ಕೊಂಚ ವಿಳಂಬವಾಗಿದೆ. ಮುಂದಿನ 15 ದಿನದೊಳಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೈತರು, ಹೇಳಿದಂತೆ ಪರಿಹಾರ ನೀಡದಿದ್ದರೆ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿ ಪ್ರತಿಭಟನೆ ಹಿಂತೆಗೆದುಕೊಂಡರು.

ರೈತ ಮುಖಂಡರಾದ ಆಂಜನೇಯ ಅಣ್ಣಿಗೇರಿ, ರಾಮಪ್ಪ ನೂರೊಂದಪ್ಪನವರ, ನಾರಾಯಣ ರಾಯರೆಡ್ಡಿ, ಕುಮಾರ ಪೂಜಾರ, ಹನುಮಂತಪ್ಪ ಕುದರಿಹಾಳ, ವೀರಪ್ಪ ಜ್ಯೋತಿ, ಉಮೇಶ ಸಾರಥಿ, ಹೊಳೆಸ್ವಾಮಿ ಪಾಟೀಲ ಮತ್ತಿತರ ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *