ಯುಗಾದಿಗೆ ಸುಧಾಕರ್ ಮಿಕ್ಸಿ ಸದ್ದು!

|ಶೋಭಾ ವಸಂತ್

ಚಿಕ್ಕಬಳ್ಳಾಪುರ: ಚುನಾವಣೆ ಆಯೋಗದ ಜಾಣ ಕುರುಡಿನ ಕಾರಣದಿಂದ ಅಭ್ಯರ್ಥಿಗಳು ಈಗಾಗಲೇ ವಾಮಮಾರ್ಗದಲ್ಲಿ ಮತದಾರರಿಗೆ ಆಮಿಷ ಒಡ್ಡುವ ಕೆಲಸಕ್ಕೆ ಅಡ್ಡಿಯಿಲ್ಲದಂತಾಗಿದೆ. ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರ ಕುಕ್ಕರ್​ನೊಂದಿಗೆ ಆರಂಭವಾದ ಚುನಾವಣೆ ಪ್ರಚಾರ ಧಾರ್ವಿುಕ ಕ್ಷೇತ್ರಗಳ ಪ್ರವಾಸ, ಸೀರೆ, ಮಿಕ್ಸಿ, ಟಿವಿ, ರೆಫ್ರಿಜರೇಟರ್​ಗಳನ್ನು ದಾಟಿ ಸಾಗುತ್ತಿದೆ. ಸಂಕ್ರಾಂತಿ ಸುಗ್ಗಿ ಹೆಸರಿನಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದ ಸುಧಾಕರ್, ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಬಹುಮಾನ ವಿತರಿಸುತ್ತಿದ್ದಾರೆ. ಟಿವಿ, ರೆಫ್ರಿಜರೇಟರ್ ಹಾಗೂ ಮಿಕ್ಸಿಗಳ ಭರ್ಜರಿ ಉಡುಗೊರೆ ನೀಡುತ್ತಿದ್ದಾರೆ. ರಂಗೋಲಿ ಬರಲಿ ಬಿಡಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಗೆರೆ ಗೀಚಿ, ಚುಕ್ಕಿ ಇಟ್ಟವರಿಗೆಲ್ಲ ಮಿಕ್ಸಿ ಮನೆಗೆ ಬಂದು ಸೇರುತ್ತಿದೆ ಎಂದು ಜನರು ನಗುತ್ತಿದ್ದಾರೆ. ದಿನ ಬೆಳಗಾದರೆ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇದೇ ಸುದ್ದಿ. ಆದರೂ ಇದರ ಹಿಂದೆ ಚುನಾವಣೆ ಪ್ರಚಾರದ ಆಮಿಷವಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಸೀರೆ ಉಡಲು ಹಿಂದೇಟು

ಇತ್ತೀಚೆಗೆ ಸುಧಾಕರ್ ಕ್ಷೇತ್ರದ ಮಹಿಳೆಯರಿಗೆ ಸೀರೆಯ ಬಾಗಿನ ಕೊಟ್ಟಿದ್ದರು. ಆದರೆ, ಆ ಸೀರೆಗಳನ್ನು ಉಡಲು ಅನೇಕ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಆ ಸೀರೆಯನ್ನು ಉಟ್ಟು ಓಡಾಡಲು ಮುಂದಾದರೆ ಸುಧಾಕರ್ ಕೊಟ್ಟ ಸೀರೆ ಎಂದು ಜನ ಲೇವಡಿ ಮಾಡುತ್ತಿದ್ದಾರೆ. ಆದ್ದರಿಂದ ಅನೇಕ ಮನೆಗಳಲ್ಲಿ ಪತಿಮಹಾಶಯರು ಆ ಸೀರೆ ಉಟ್ಟರೆ ಮರ್ಯಾದೆಗೇಡು, ಉಡಬೇಡಿ ಎಂದು ಕಟ್ಟಪ್ಪಣೆ ಹೊರಡಿಸಿದ್ದಾರಂತೆ.

ಮಹಿಳೆಯರ ವಿವರ ಏಕೆ?

ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ದವರಿಗೆ ಟೋಕನ್ ನೀಡಿ ಮಿಕ್ಸಿ ವಿತರಿಸಲಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಸ್ಪರ್ಧಿಗಳ ಆಧಾರ್, ರೇಷನ್, ಮೊಬೈಲ್ ಸಂಖ್ಯೆ ಸೇರಿ ವಿವಿಧ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಬಹುಮಾನ ನೀಡಲು ಈ ಮಾಹಿತಿ ಪಡೆದುಕೊಳ್ಳುತ್ತಿರುವುದು ಏಕೆ? ಯಾವ ಕಾರಣಕ್ಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಹಿಳಾ ಮತದಾರರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *