ಯುಕೋ ಬ್ಯಾಂಕ್ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿರುವ ಶಂಕೆ: 150ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿರುವ ಯುಕೋ ಬ್ಯಾಂಕ್ ಶಾಖೆಯ ಬಹುಮಹಡಿ ಕಟ್ಟಡದ ಲಿಫ್ಟ್​ನಲ್ಲಿ ಬುಧವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಕಟ್ಟಡದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿದರು.

ಆರು ಮಹಡಿ ಕಟ್ಟಡದಲ್ಲಿ ವಿವಿಧ ತರಬೇತಿ ಕೇಂದ್ರ, ಇನ್ನಿತರ ಸಂಸ್ಥೆಗಳ ಕಚೇರಿಗಳಿವೆ. 2ನೇ ಮಹಡಿಯಲ್ಲಿ ಯೂಕೋ ಬ್ಯಾಂಕ್ ಶಾಖೆ ಕಚೇರಿಯಿದೆ. ಮಧ್ಯಾಹ್ನ 2.40ರಲ್ಲಿ ಕಟ್ಟಡದ ಎರಡನೇ ಮಹಡಿಯ ಯುಕೋ ಬ್ಯಾಂಕ್ ಲಿಫ್ಟ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ಕ್ಷಣಾರ್ಧದಲ್ಲಿ ದಟ್ಟ ಹೊಗೆ ಆವರಿಸಿತು. ಗಾಬರಿಗೊಂಡ ಕೆಲವರು ಕಟ್ಟಡದಿಂದ ಹೊರಗೆ ಬಂದಿದ್ದಾರೆ.ಇನ್ನು ಕೆಲವರಿಗೆ ಹೊರಬರಲು ಸಾಧ್ಯವಾಗದೆ 6ನೇ ಮಹಡಿ ಏರಿ ಕುಳಿತಿದ್ದರು. ಅಲ್ಲಿಂದ ಜಿಗಿಯಲು ಯತ್ನಿಸಿದವರಿಗೆ ಸ್ಥಳೀಯರು ಧೈರ್ಯ ತುಂಬಿ ಜಿಗಿಯದಂತೆ ತಡೆದರು.

ಘಟನೆಯ ಮಾಹಿತಿ ಪಡೆದು ಮಧ್ಯಾಹ್ನ 3.15ಕ್ಕೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಸತತ ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಕಟ್ಟಡದಲ್ಲಿ ಸಿಲುಕಿದ್ದ 150ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿ ಸುರಕ್ಷಿತವಾಗಿ ಹೊರಗೆ ಕರೆತಂದರು. ಅವಘಡದಲ್ಲಿ ಅಸ್ವಸ್ಥಗೊಂಡಿದ್ದ ಮೂವರು ಬಾಲಕಿಯರನ್ನು

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟ ಹೊಗೆಯಿಂದ ಉಸಿರಾಟದ ಸಮಸ್ಯೆಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

 

ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ.
| ಸುನೀಲ್ ಅಗರ್ವಾಲ್ ಎಡಿಜಿಪಿ (ಅಗ್ನಿಶಾಮಕ ಮತ್ತು ತುರ್ತಸೇವೆ)

Leave a Reply

Your email address will not be published. Required fields are marked *