ಸಿನಿಮಾ

ಯಾವುದೇ ಖಾತೆಗೆ ಪಟ್ಟು ಹಿಡಿದಿಲ್ಲ

ವಿಜಯವಾಣಿ ಸುದ್ದಿಜಾಲ ತುಮಕೂರು
ನಾನು ಯಾವುದೇ ಖಾತೆ ಬೇಕು ಅಂತ ಕೇಳಿಲ್ಲ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ನೂತನ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸಿದ್ಧಗಂಗಾ ಮಠಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂತಹ ಖಾತೆ ಕೊಟ್ಟರೆ ಜನಸೇವೆ ಮಾಡಲು ಹೆಚ್ಚು ಅನುಕೂಲ ಎಂಬ ಮಾತನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಮುಂದಿನ ಗುರುವಾರ ಅಥವಾ ಶುಕ್ರವಾರ ಖಾತೆ ಹಂಚಿಕೆ ಮಾಡುವ ಸಾಧ್ಯತೆಗಳಿವೆ. ವಿಧಾನಸಭಾ ಅಧ್ಯಕ್ಷರು ಯಾರೆಂಬುದು 24ರೊಳಗೆ ತೀರ್ಮಾನವಾಗಲಿದೆ ಎಂದರು.
ಡಿಸಿಎಂ ಹುದ್ದೆ, ಕೆಲವೊಂದು ಅನಿವಾರ್ಯ: ರಾಜಕಾರಣದಲ್ಲಿ ಕೆಲವೊಂದು ಅನಿವಾರ್ಯತೆಗಳು ಇರುತ್ತವೆ. ಹಾಗಾಗಿ, ಪಕ್ಷ ನಿರ್ಧಾರ ಮಾಡಿದ ಹಾಗೆ ಆ ನಿರ್ಧಾರಕ್ಕೆ ನಾವು ಒಪ್ಪಿಗೆ ಸೂಚಿಸಬೇಕಾಗುತ್ತದೆ. ಇದೇ ಅಂತ್ಯ ಅಂತಲ್ಲ ಎಂದು ಎಂ.ಬಿ.ಪಾಟೀಲ್ ಡಿಸಿಎಂ ಹುದ್ದೆ ಆಕಾಂಕ್ಷೆ ಬಗ್ಗೆ ಸ್ಪಷ್ಟಪಡಿಸಿದರು.
ಶೆಟ್ಟರ್‌ಗೆ ಸೂಕ್ತ ಸ್ಥಾನಮಾನ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದೇವೆ. ಅವರಿಗೆ ಸೋಲುಂಟಾಗಿದೆ. ಆದರೂ ಸೂಕ್ತ ಸ್ಥಾನಮಾನ ಕೊಡಲು ತೀರ್ಮಾನಿಸಿದ್ದು ಇದಕ್ಕೆ ಎಲ್ಲರ ಸಹಮತ ಇದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪಾಟೀಲ್ ಪ್ರತಿಕ್ರಿಯಿಸಿದರು. ಈ ವೇಳೆ ಸಚಿವ ಎಂ.ಬಿ.ಪಾಟೀಲ್ ಪತ್ನಿ ಆಶಾಪಾಟೀಲ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರರವಿಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್, ಬಿಬಿಎಂಪಿ ಮಾಜಿ ಉಪಮೇಯರ್ ಬಿ.ಎಸ್.ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.
ಸಮಾಜದಿಂದ ಅಭಿನಂದನೆ: ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಚಂದ್ರಮೌಳಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್ ಪಟೇಲ್ ಸೇರಿದಂತೆ ಹಲವರು ಸಚಿವ ಎಂ.ಬಿ.ಪಾಟೀಲ್ ಅವರನ್ನು ಅಭಿನಂದಿಸಿದರು. ಪಿಎಸ್ಸೈ ನೇಮಕಾತಿಯಲ್ಲಿ ಪೊಲೀಸ್ ಎಡಿಜಿಪಿ ಅಮೃತಪೌಲ್ ಬಂಧಿಸಲಾಯಿತು. ಏನು ಇಲ್ದೆ ಪೌಲ್ ಅವರನ್ನು ಬೊಮ್ಮಾಯಿ ಜೈಲಿಗೆ ಹಾಕಿದರಾ? ನೀರಾವರಿ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ, ಪಿಡಬ್ಲ್ಯೂಡಿ, ಯಾವ್ಯಾವ ಇಲಾಖೆಯಲ್ಲಿ ನೇಮಕಾತಿ, ಕಾಮಗಾರಿಗಳಲ್ಲಿ ಕೆಲವೊಂದು ಕಡೆ 100 ಕೋಟಿ ಇದ್ದರೆ 150 ಕೋಟಿ ರೂ. ಹೆಚ್ಚಿಸಿ ಅಂದಾಜು ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದೆಲ್ಲವನ್ನೂ ನಾವು ತನಿಖೆ ಮಾಡಿಸುತ್ತೇವೆ. ಸಾಕ್ಷಿ ಕೇಳುವ ಬೊಮ್ಮಾಯಿ ಅವರಿಗೆ ಆ ನಂತರ ಗೊತ್ತಾಗುತ್ತದೆ ಎಂದು ಸೂಕ್ಷ್ಮವಾಗಿ ಎಚ್ಚರಿಸಿದರು.
ಬೊಮ್ಮಾಯಿಗೆ ಟಾಂಗ್ ಕೊಟ್ಟ ಎಂಬಿಪಿ: 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದು ಕಾಂಗ್ರೆಸ್ ಅಲ್ಲ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು. ಇದಕ್ಕೆ ಸಾಕ್ಷಿ ಕೇಳುವ ಬೊಮ್ಮಾಯಿ ಅವರಿಗೆ ಅವರದೇ ಪಕ್ಷದ ನಿಗಮದ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ 9-10 ಕೋಟಿ ಕಂತೆ ಕಂತೆ ಹಣ ಸಿಕ್ಕಿದ್ದು, ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎಂದು ಎಂ.ಬಿ.ಪಾಟೀಲ್ ಟಾಂಗ್ ಕೊಟ್ಟರು.
ಕಾಂಗ್ರೆಸ್‌ಗೆ ಕೇವಲ ಲಿಂಗಾಯತರಲ್ಲ. ಎಲ್ಲ ಧರ್ಮದವರು ಬೆಂಬಲ ನೀಡಿದ್ದಾರೆ. ಪರಿಶಿಷ್ಟ ಜಾತಿ, ವಾಲ್ಮೀಕಿ ಸಮಾಜ, ಮುಸ್ಲಿಮರು ಬೆಂಬಲಿಸಿದ್ದು, ಅಪಪ್ರಚಾರದಿಂದ ದೂರ ಇದ್ದಂತಹ ಲಿಂಗಾಯತರು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಹಾಗಾಗಿ, ಸೂಕ್ತವಾದ ನ್ಯಾಯ ಒದಗಿಸುವಂತೆ ಹೈಕಮಾಂಡ್‌ಗೆ ಮನವರಿಕೆ ಮಾಡಲಾಗಿದೆ.
ಎಂ.ಬಿ.ಪಾಟೀಲ್ ನೂತನ ಸಚಿವ

Latest Posts

ಲೈಫ್‌ಸ್ಟೈಲ್